×
Ad

ಸರ್ವರಿಗೂ ಶಿಕ್ಷಣ ನನ್ನ ಗುರಿ ವಿಶ್ವದ ಅತ್ಯಂತ ಕಿರಿಯ ಪ್ರಾಂಶುಪಾಲ ಬಾಬರ್ ಅಲಿ ಅಭಿಮತ

Update: 2016-01-16 23:38 IST

ಮಂಗಳೂರು, ಜ. 16: ಸಮಾಜವನ್ನು ಕಾಡುತ್ತಿರುವ ಬಡತನ, ಆರ್ಥಿಕ ಹಿಂದುಳಿಕೆ ಮೊದಲಾದ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುವ ಮೂಲಕ ಸರ್ವರಿಗೂ ಶಿಕ್ಷಣ ನೀಡಬೇಕೆಂಬುದು ನನ್ನ ಜೀವನದ ಗುರಿಯಾಗಿದೆ ಎಂದು ಪ್ರತಿಷ್ಠಿತ ಬಿಬಿಸಿಯಿಂದ ‘ವಿಶ್ವದ ಅತ್ಯಂತ ಕಿರಿಯ ಪ್ರಾಂಶುಪಾಲ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಶ್ಚಿಮ ಬಂಗಾಲದ ಮುರ್ಶಿದಾಬಾದ್‌ನ ಬಾಬರ್ ಅಲಿ ಹೇಳಿದ್ದಾರೆ.
ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನಿಂದ ಜನವರಿ 17ರಂದು ನಗರದ ಪುರಭವನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಇಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ‘ವಾರ್ತಾಭಾರತಿ’ಯು ನಡೆಸಿದ ಸಂದರ್ಶನದಲ್ಲಿ ಅವರು ಮೇಲಿನಂತೆ ತಿಳಿಸಿದರು.
ತನ್ನ 9ರ ಹರೆಯದಲ್ಲಿ 5ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲ ಅದು. ನಾನು ಸಂಜೆ ಶಾಲೆಯಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಸುಮಾರು 5ರಿಂದ 8 ವರ್ಷದೊಳಗಿನ ಮಕ್ಕಳು ಆಟದಲ್ಲಿ ಕಾಲ ಕಳೆಯುತ್ತಾ ಶಾಲೆಯಿಂದ ದೂರವಾಗಿರುವುದನ್ನು ಕಂಡು ಮರುಕಪಟ್ಟಿದ್ದೆ. ನನ್ನಂತೆ ಅವರೂ ಕೂಡ ಓದಬೇಕೆಂಬ ಹಂಬಲ ಅಂದು ನನ್ನಲ್ಲಿ ಹುಟ್ಟಿಕೊಂಡಿತ್ತು. ನಾನು ಶಾಲೆಗೆ ಹೋಗುತ್ತಿದ್ದ ಅವಧಿಯಲ್ಲೇ ಅವರನ್ನೂ ಕರೆದು ಒಂದೆಡೆ ಸೇರಿಸಿ ಓದಿಸುತ್ತಿದೆ. ಪ್ರಾರಂಭದಲ್ಲಿ ಎಂಟು ಮಕ್ಕಳು ಸೇರಿದ್ದರು. ಆರು ಹುಡುಗಿಯರು ಮತ್ತು ಇಬ್ಬರು ಹುಡುಗರು. ಅದರಲ್ಲಿ ನನ್ನ ಸಹೋದರಿಯೂ ಒಬ್ಬಳು. ಅಂದಿನ ನನ್ನ ಕಿರಿಯ ವಯಸ್ಸಿನ ಈ ಪ್ರಯತ್ನಕ್ಕೆ ನನ್ನ ಹೆತ್ತವರು ಸಹಕಾರ ನೀಡಿದ್ದರು. ಅನಂತರ ಊರಿನವರು ಕೂಡ ಪ್ರೋತ್ಸಾಹ ನೀಡಲು ಪ್ರಾರಂಭಿಸಿದರು. ಊರಿನವರ ಈ ಪ್ರೋತ್ಸಾಹವೇ ಮಕ್ಕಳಿಗೆ ನಿತ್ಯ ಪಾಠ ಹೇಳಿಕೊಡಲು ನನಗೆ ಇನ್ನಷ್ಟು ಹುಮ್ಮಸ್ಸು ನೀಡಿತ್ತು. ತಿಂಗಳು ಕಳೆದಂತೆ ಮಕ್ಕಳ ಸಂಖ್ಯೆಯೂ ಹೆಚ್ಚಾಗ ತೊಡಗಿದ್ದವು. ಅದರಂತೆ 2002ರಲ್ಲಿ ಊರಿನವರ ಸಹಕಾರದಿಂದ ಪುಟ್ಟ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿದ್ದೆ. ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದ್ದ ಈ ಪುಟ್ಟ ಸಂಸ್ಥೆಯು ಇಂದು ಆನಂದ ಶಿಕ್ಷ ನಿಕೇತನ್ ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂತು. ಇಂದು ಈ ಸಂಸ್ಥೆಯಲ್ಲಿ 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದ್ದೇನೆ. ಆರಂಭದಿಂದ ಇವತ್ತಿನವರೆಗೂ ಈ ಶಾಲೆಯನ್ನು ನಾನು ನಡೆಸುತ್ತಿದ್ದು, ಶಾಲೆಯ ಮುಖ್ಯೋಪಾಧ್ಯಾಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎನ್ನುತ್ತಾರೆ ಬಾಬರ್ ಅಲಿ.
2009ರಲ್ಲಿ ಬಿಬಿಸಿ ನನ್ನನ್ನು ವಿಶ್ವದ ಅತ್ಯಂತ ಕಿರಿಯ ಪ್ರಾಂಶುಪಾಲ ಎಂದು ಗುರುತಿಸಿಕೊಂಡಿತು. ಆಗ ನನ್ನ ವಯಸ್ಸು 16 ವರ್ಷ ಆಗಿತ್ತು. ಕಿರಿಯ ವಯಸ್ಸಿನಲ್ಲಿನ ನನ್ನ ಪ್ರಯತ್ನಕ್ಕೆ ಉತ್ತಮ ಪ್ರತಿಫಲ ಸಿಕ್ಕಿದೆ ಎಂಬ ಸಂತೃಪ್ತಿ ನನಗಿದೆ. ಎಲ್ಲರಿಗೂ ಶಿಕ್ಷಣ ದೊರೆಯಬೇಕೆಂಬ ನನ್ನ ಗುರಿಯಿಂದ ನಾನು ಹಿಂಜರಿಯುವುದಿಲ್ಲ. ನನ್ನ ಶಿಕ್ಷಣ ಸಂಸ್ಥೆಗೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದು ಬಾಬರ್ ಅಲಿ ವಿವರಿಸುತ್ತಾರೆ.
ಕಾರ್ಯಕ್ರಮಕ್ಕೆ ‘ರಿಯಲ್ ಹೀರೋ’
ಜನವರಿ 17ರಂದು ರವಿವಾರ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನಿಂದ ಸೇವಾ ಉತ್ಸವ 2016 ಅಂಗವಾಗಿ ನಗರದ ಪುರಭವನದಲ್ಲಿ ಬೆಳಗ್ಗೆ 9:30ಕ್ಕೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ವಿಶ್ವದ ಕಿರಿಯ ಪ್ರಾಂಶುಪಾಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಾಬರ್ ಅಲಿ ಭಾಗವಹಿಸಲಿದ್ದಾರೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News