×
Ad

ಜೀವನದ ಅಂತಿಮ ಹಂತದಲ್ಲಿರುವ ರೋಗಿಗೆ ವೆಂಟಿಲೇಟರ್ ಬೇಕೇ? ಸರಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

Update: 2016-01-16 23:50 IST

ಹೊಸದಿಲ್ಲಿ,ಜ.16: ಬದುಕಲು ಸಾಧ್ಯವೇ ಇಲ್ಲ ಎಂದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟ ರೋಗಿಯ ಇಚ್ಛೆಗೆ ವಿರುದ್ಧವಾಗಿ ಆತನನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿ ಜೀವಂತವಾಗಿಯೇ ಇಟ್ಟುಕೊಳ್ಳಬೇಕೇ ಎಂದು ಸರಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಜೀವನದ ಅಂತಿಮ ಘಟ್ಟದಲ್ಲಿರುವ ರೋಗಿಯ ಆಯುಷ್ಯವನ್ನು ಹೆಚ್ಚಿಸಲು ಆತನ ಇಚ್ಛೆಗೆ ವಿರುದ್ಧವಾಗಿ ವೆಂಟಿಲೇಟರ್ ಅಥವಾ ಜೀವ ರಕ್ಷಕ ವ್ಯವಸ್ಥೆಯಲ್ಲಿ ಇಡುವುದನ್ನು ಕಿರುಕುಳ ಎಂಬುದಾಗಿ ನ್ಯಾ.ಎ.ಆರ್.ದವೆ, ನ್ಯಾ.ಕುರಿಯನ್ ಜೋಸೆಫ್, ನ್ಯಾ.ಎಸ್.ಕೆ.ಸಿಂಗ್, ನ್ಯಾ.ಎ.ಕೆ.ಗೋಯಲ್ ಹಾಗೂ ನ್ಯಾ. ಆರ್.ಎಫ್.ನರಿಮನ್‌ರಿದ್ದ ಐವರು ನ್ಯಾಯಾಧೀಶರ ಪೀಠ ಪರಿಗಣಿಸಿದೆ. ಈ ರೀತಿ ಮಾಡುವುದರಿಂದ ರೋಗಿಯ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ಹೊರೆಯೂ ಉಂಟಾಗುತ್ತದೆ ಎಂಬುದನ್ನು ಪೀಠ ಗಮನಿಸಿದೆ. ರೋಗಿಯು ಭಾವನಾತ್ಮಕವಾಗಿ ನರಳುತ್ತಿರು ವುದನ್ನು ತನ್ನ ಲಾಭಕ್ಕಾಗಿ ಆಸ್ಪತ್ರೆಗಳು ಬಳಸಿಕೊಳ್ಳು ತ್ತಿದೆ ಎಂದು ಒಪ್ಪಿಕೊಂಡ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ಪತ್ವಾಲಿಯಾ, ವೆಂಟಿಲೇಟರ್‌ಗಳು ಲಾಭದಾಯಕವಾದ ಉದ್ಯಮವಾಗಿ ಇಂದು ಮಾರ್ಪಟ್ಟಿದೆ ಎಂದಿದ್ದಾರೆ. ಬದುಕುವ ಇಚ್ಛೆಯನ್ನು ಕಾನೂನು ಸಮ್ಮತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ 15 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ತನ್ನನ್ನು ವೆಂಟಿಲೇಟರ್ ಅಥವಾ ಜೀವ ರಕ್ಷಕ ವ್ಯವಸ್ಥೆಯಲ್ಲಿ ಇಟ್ಟು ಬದುಕುವಂತೆ ಮಾಡಬಾರದು ಎಂದು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರುವ ಸಂದರ್ಭದಲ್ಲಿ ವ್ಯಕ್ತಿ ನೋಂದಾಯಿಸಿಕೊಳ್ಳಲು ಇದರಲ್ಲಿ ಅವಕಾಶವಿದೆ. ದಯಾಮರಣವನ್ನು ಕಾನೂನು ಸಮ್ಮತಗೊಳಿಸುವು ದಕ್ಕೆ ಸಂಬಂಧಿಸಿದಂತೆ ಕಾನೂನು ಆಯೋಗದ 196 ಹಾಗೂ 241ನೆ ವರದಿಗಳನ್ನು ಕೇಂದ್ರ ಸರಕಾರವು ಪರಿಶೀಲಿಸುತ್ತಿರುವುದಾಗಿ ಪತ್ವಾಲಿಯಾ ತಿಳಿಸಿದರು. ಎನ್‌ಜಿಒ ಪರವಾಗಿ ಕೋರ್ಟ್‌ಗೆ ಹಾಜರಾದ ನ್ಯಾಯವಾದಿ ಪ್ರಶಾಂತ್ ಭೂಷಣ್, ಜೀವನದ ಅಂತಿಮ ಹಂತದಲ್ಲಿರುವ ಹಲವು ರೋಗಿಗಳನ್ನು ಜೀವ ರಕ್ಷಕ ವ್ಯವಸ್ಥೆಯ ಮೂಲಕ ಉಸಿರಾಡುವಂತೆ ಮಾಡಲಾಗುತ್ತಿದೆ. ಬದುಕುವ ಇಚ್ಛಗೆ ಕಾನೂನಾತ್ಮಕ ಅನುಮೋದನೆ ದೊರೆಯದಿರುವ ಹಿನ್ನೆಲೆಯಲ್ಲಿ ಅವರು ಇಂದಿಗೂ ನೋವುಗಳೊಂದಿಗೆ ದಿನದೂಡುತ್ತಿದ್ದಾರೆ ಎಂದರು. ಓರ್ವನ ಇಚ್ಛೆಗೆ ವಿರುದ್ಧವಾಗಿ ವೆಂಟಿಲೇಟರ್ ಸಹಾಯದಿಂದ ಆತನನ್ನು ಜೀವಿಸುವಂತೆ ಮಾಡುವುದು ಶರೀರದ ಮೇಲೆ ಮಾಡುವ ಹಲ್ಲೆಗೆ ಸಮ ಎಂದ ಅವರು, ಘನತೆಯೊಂದಿಗೆ ಸಾಯುವುದೂ ಬದುಕುವ ಹಕ್ಕಿನಲ್ಲಿಯೇ ಬರುತ್ತದೆ ಎಂದು ಕೋರ್ಟ್‌ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News