×
Ad

ಮಾಲ್ಡಾ ಹಿಂಸಾಚಾರ: ರಾಷ್ಟ್ರಪತಿಗೆ ಬಿಜೆಪಿ ಮನವಿ

Update: 2016-01-17 00:13 IST

ಹೊಸದಿಲ್ಲಿ,ಜ.16: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗುವಂತಹ ಘಟನೆಗಳು ಸಂಭವಿಸುತ್ತಿದ್ದು, ಈ ಕುರಿತು ವರದಿ ಸಲ್ಲಿಸಲು ಅಲ್ಲಿನ ಸರಕಾರಕ್ಕೆ ಸೂಚಿಸಬೇಕೆಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ಬಿಜೆಪಿ ನಿಯೋಗ ಮನವಿ ಮಾಡಿದೆ. ಪಕ್ಷದ ಕಾರ್ಯದರ್ಶಿ ಸಿದ್ಧಾರ್ಥನಾಥ್ ಸಿಂಗ್, ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗೀಯ ಹಾಗೂ ಪ.ಬಂಗಾಳದ ಬಿಜೆಪಿ ಮುಖಂಡರು ನಿಯೋಗದಲ್ಲಿದ್ದರು. ಟಿಎಂಸಿ ಸರಕಾರವು ವೋಟ್ ಬ್ಯಾಂಕ್ ರಾಜಕೀಯವನ್ನು ಪ್ರಚೋದಿಸುತ್ತಿದೆ. ಪ.ಬಂಗಾಳದಲ್ಲಿ ನುಸುಳುಕೋರರಿಗೆ ನೆಲೆ ನಿಲ್ಲಲು ಅವಕಾಶ ಮಾಡಿಕೊಡಲಾಗುತ್ತಿದೆ. ಇತ್ತೀಚೆಗೆ ನಡೆದ ಮಾಲ್ಡಾ ಘಟನೆಗೆ ಕಳ್ಳನೋಟಿನ ಜಾಲ ಹಾಗೂ ಉಗ್ರ ಚಟುವಟಿಕೆಗಳ ನಂಟು ಇದೆ ಎಂದು ಬಿಜೆಪಿ ಆರೋಪಿಸಿದೆ. ಉ.ಪ್ರದೇಶದಲ್ಲಿ ಹಿಂದೂ ನಾಯಕರೋರ್ವರು ಪ್ರವಾದಿಯವರ ವಿರುದ್ಧ ನೀಡಿದ್ದ ಆಕ್ಷೇಪಕಾರಿ ಹೇಳಿಕೆಯನ್ನು ಪ್ರತಿಭಟಿಸಿ ಮುಸ್ಲಿಮ್ ಸಂಘಟನೆಗಳು ಕಲಿಯಾಚೌಕ್‌ನಲ್ಲಿ ಕಳೆದ ವಾರ ಆಯೋಜಿಸಿದ್ದ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿತ್ತು. ಹಿಂಸಾಚಾರವನ್ನು ಹತ್ತಿಕ್ಕಲು ಬಂದ ಬಿಎಸ್‌ಎಫ್ ಸಿಬ್ಬಂದಿಯ ವಾಹನಗಳನ್ನು ಬೆಂಕಿಗಾಹುತಿ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹಲವು ವಾಹನಗಳು ಉದ್ರಿಕ್ತರ ಆಕ್ರೋಶಕ್ಕೆ ತುತ್ತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News