×
Ad

ಪೇಜಾವರ ಪರ್ಯಾಯಕ್ಕೆ ‘ಪುತ್ತಿಗೆ’ ವಿವಾದದ ಕಾರ್ಮೋಡ

Update: 2016-01-17 00:17 IST

ಉಡುಪಿ: ಪೇಜಾವರ ಮಠಾಧೀಶರ ದಾಖಲೆಯ ಐದನೆ ಪರ್ಯಾಯ ಪೀಠಾರೋಹಣ ಸಮಾರಂಭದ ಅಂಗವಾಗಿ ಜ.18ರಂದು ನಡೆಯುವ ಪರ್ಯಾಯ ದರ್ಬಾರ್‌ನಲ್ಲಿ ತಾವು ಭಾಗವಹಿಸಿ ಪೇಜಾವರ ಶ್ರೀಗೆ ಪುತ್ತಿಗೆ ಮಠದ ವತಿಯಿಂದ ‘ಅಭಿನವ ಶ್ರೀಸುಧೀಂದ್ರ ತೀರ್ಥ’ ಬಿರುದು ಪ್ರದಾನ ಮಾಡುವುದಾಗಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಇಂದು ಘೋಷಿಸುವ ಮೂಲಕ ಪ್ರಶಾಂತವಾಗಿದ್ದ ಪರ್ಯಾಯ ಸಂಭ್ರಮದಲ್ಲಿ ವಿವಾದದ ಕಂಪನಗಳನ್ನೆಬ್ಬಿಸಿದರು.

ಶ್ರೀಮಧ್ವಾಚಾರ್ಯರು ಸ್ಥಾಪಿಸಿದ ಶ್ರೀಕೃಷ್ಣ ಮಠದ ಯತಿಗಳಿಗೆ ನಿಷಿದ್ಧವಾಗಿರುವ ‘ಸಾಗರೋಲ್ಲಂಘನೆ’ ಮಾಡಿರುವ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಸ್ವಾಮೀಜಿ ಇಂದು ತನ್ನ ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಡಿದ ಈ ಘೋಷಣೆ ಈ ಸಲವೂ ಪರ್ಯಾಯದಲ್ಲಿ ವಿವಾದದ ಹೊಗೆ ಏಳುವಂತೆ ಮಾಡಿದೆ.

ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥರು ಜ.18ರಂದು ಮುಂಜಾನೆ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ಎಂಟು ನೂರು ವರ್ಷಗಳ ಇತಿಹಾಸದಲ್ಲಿ ಪೇಜಾವರಶ್ರೀ ಮೊದಲನೆಯವರಾಗಿ ಐದನೆ ಬಾರಿಗೆ ಶ್ರೀಕೃಷ್ಣ ಪೂಜಾ ಕೈಂಕರ್ಯದ ಪರ್ಯಾಯ ‘ಸರ್ವಜ್ಞ’ ಪೀಠಾರೋಹಣ ಏರಲು ಕ್ಷಣಗಣನೆ ಆರಂಭವಾಗಿದೆ. ಉಡುಪಿಯ ಅಷ್ಟಮಠಗಳಲ್ಲಿ ಮೊದಲನೆಯವರಾಗಿ ಸಾಗರೋಲ್ಲಂಘನೆ ಮಾಡಿ ‘ವಿದೇಶ’ಗಳಿಗೆ ತೆರಳಿದ ಪುತ್ತಿಗೆ ಶ್ರೀಗಳು, ಆ ಬಳಿಕ ಕೆಲವು ಮಠಗಳಿಗೆ ಅಮಾನ್ಯರಾಗಿದ್ದಾರೆ. 2008-10ರಲ್ಲಿ ನಡೆದ ಪುತ್ತಿಗೆ ಶ್ರೀ ಮೂರನೆ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಮೆರವಣಿಗೆ ಹಾಗೂ ದರ್ಬಾರ್‌ನ್ನು ಹೆಚ್ಚಿನೆಲ್ಲಾ ಸ್ವಾಮಿಗಳು ಬಹಿಷ್ಕರಿಸಿದ್ದರು. ಆ ಬಳಿಕ ನಡೆದ ಸೋದೆ ಹಾಗೂ ಕಾಣಿಯೂರು ಪರ್ಯಾಯಗಳ ದರ್ಬಾರ್‌ಗೆ ಪುತ್ತಿಗೆಶ್ರೀಗೆ ಆಹ್ವಾನವಿರಲಿಲ್ಲ.

‘ಉಡುಪಿ ಶ್ರೀಕೃಷ್ಣ ಮಠದ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯೊಂದು ನಿರ್ಮಾಣಗೊಳ್ಳುತ್ತಿದೆ. ಈ 800 ವರ್ಷಗಳಲ್ಲಿ ಯಾರೊಬ್ಬರೂ ಐದು ಪರ್ಯಾಯಗಳನ್ನು ನಡೆಸಿಲ್ಲ. ಇದಕ್ಕಾಗಿ ಇಡೀ ನಾಡಿನ ಜನತೆಯೇ ಪೇಜಾವರ ಶ್ರೀಗಳನ್ನು ಅಭಿನಂದಿಸುತ್ತಿದೆ. ಈ ಸಂದರ್ಭದಲ್ಲಿ ನಮ್ಮ ನಡುವಿನ ಹಿರಿಯ ಶ್ರೀಗಳನ್ನು ಅಭಿನಂದಿಸುವುದು ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಕರ್ತವ್ಯವಾಗಿದೆ’ ಎಂದು ಪುತ್ತಿಗೆ ಶ್ರೀ ತಿಳಿಸಿದರು.

ನಮ್ಮ ಮಠದ ದೇಶ ಮತ್ತು ವಿದೇಶಗಳ ಭಕ್ತರ ಹಾಗೂ ಅಭಿಮಾನಿಗಳ ಒತ್ತಾಸೆಯಂತೆ ತಾವು ಪುತ್ತಿಗೆ ಮಠದ ಪರಮ ಗುರುಗಳಾದ ಶ್ರೀಸುಧೀಂದ್ರ ತೀರ್ಥರ ನೆನಪಿನಲ್ಲಿ ಪೇಜಾವರ ಶ್ರೀಗಳಿಗೆ ದರ್ಬಾರ್ ಸಭೆಯಲ್ಲಿ ‘ಅಭಿನವ ಶ್ರೀಸುಧೀಂದ್ರ ತೀರ್ಥ’ ಬಿರುದು ನೀಡಲು ನಿಧರ್ರಿಸಿದ್ದೇವೆ ಎಂದರು.
ಶ್ರೀಸುಧೀಂದ್ರ ತೀರ್ಥರು 103 ವರ್ಷಗಳ ಕಾಲ ಬದುಕಿದ್ದಲ್ಲದೆ, ನಾಲ್ಕು ಪರ್ಯಾಯಗಳನ್ನು ತಾವೇ ಮಾಡಿ, ಇನ್ನುಳಿದ ಎರಡು ಅವಧಿಯಲ್ಲಿ ತಮ್ಮ ಶಿಷ್ಯ ಹಾಗೂ ನನ್ನ ಗುರುಗಳಾದ ಶ್ರೀಸುಜ್ಞಾನೇಂದ್ರ ತೀರ್ಥರಿಂದ ಪರ್ಯಾಯ ಮಾಡಿಸಿದ್ದರು. ಶ್ರೀವಿಶ್ವೇಶತೀರ್ಥರು ನಮ್ಮ ಪರಮಗುರುಗಳ ಅಚ್ಚುಮೆಚ್ಚಿನ ಪ್ರಿಯ ಶಿಷ್ಯರಾಗಿದ್ದರು ಎಂದ ಪುತ್ತಿಗೆ ಶ್ರೀ, ಅವರ ನೆಚ್ಚಿನ ಶಿಷ್ಯರಾದ ಶ್ರೀವಿಶ್ವೇಶತೀರ್ಥರು ಹಾಗೂ ಪಲಿಮಾರು ಮಠದ ಶ್ರೀವಿದ್ಯಾಮಾನ್ಯ ತೀರ್ಥರು ಒಟ್ಟಿಗಿರುವ ಚಿತ್ರ ದಾಖಲೆಯಾಗಿ ಈಗಲೂ ಇದೆ ಎಂದರು.

ಶ್ರೀಸುಧೀಂದ್ರ ತೀರ್ಥರಿಗೆ 100 ವರ್ಷ ತುಂಬಿದಾಗ ಶ್ರೀವಿದ್ಯಾಮಾನ್ಯ ತೀರ್ಥರು ಹಾಗೂ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ಶತಮಾನೋತ್ಸವ ಹಾಗೂ ಅಪೂರ್ವವಾದ ಕನಕಾಭಿಷೇಕವನ್ನು ನಡೆಸಲಾಗಿತ್ತು. ಅದಮಾರು ಶ್ರೀಗಳು ಅಂದು ಅವರ ಹೆಸರಿನಲ್ಲಿ ರಜತರಥವನ್ನು ಅರ್ಪಿಸಿದ್ದರು. ಹೀಗೆ ಇಂತಹ ಐತಿಹಾಸಿಕ ಕ್ಷಣಗಳನ್ನು ಎಲ್ಲರೂ ಸೇರಿ ಆಚರಿಸಿದ ಉದಾಹರಣೆ ಶ್ರೀಕೃಷ್ಣ ಮಠದಲ್ಲಿದ್ದು, ಈ ಬಾರಿ ತಾವೂ ಪುತ್ತಿಗೆ ಮಠದ ವತಿಯಿಂದ ಪೇಜಾವರ ಶ್ರೀಗಳ ಐತಿಹಾಸಿಕ ಸಾಧನೆಯನ್ನು ಬಿರುದು ನೀಡಿ ಆಚರಿಸುತ್ತೇವೆ ಎಂದರು.

ತಮಗೆ ಈ ಬಾರಿ ಪರ್ಯಾಯದಲ್ಲಿ ಭಾಗವಹಿಸುವಂತೆ ಪೇಜಾವರ ಶ್ರೀಗಳು 15 ದಿನಗಳ ಹಿಂದೆ ತೀರ್ಥಹಳ್ಳಿಯ ತಮ್ಮ ಶಾಖಾ ಮಠಕ್ಕೆ ಬಂದು ಆಹ್ವಾನಿಸಿದ್ದಾರೆ. ಅಷ್ಟಮಠದ ಒಂದು ಭಾಗವಾಗಿ ತಮಗೆ ಪ್ರತ್ಯೇಕ ಆಹ್ವಾನದ ಅಗತ್ಯವಿಲ್ಲ. ತಾವು ಈ ಬಾರಿ ಪರ್ಯಾಯ ಮೆರವಣಿಗೆ ಮತ್ತು ದರ್ಬಾರ್‌ಗಳಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.

ಪೇಜಾವರ ಶ್ರೀ ಸ್ಪಷ್ಟನೆ

‘ತಾವು ಪುತ್ತಿಗೆ ಶ್ರೀಗಳಿಗೆ ಪರ್ಯಾಯಕ್ಕೆ ಆಹ್ವಾನ ನೀಡುವಾಗ ಕಳೆದ ಕಾಣಿಯೂರು ಪರ್ಯಾಯದ ವೇಳೆ ಭಾಗವಹಿಸಿದ ರೀತಿಯಲ್ಲೇ ಈ ಬಾರಿ ಭಾಗವಹಿಸಿ ಸಹಕರಿಸಿ’ ಎಂದು ಹೇಳಿದ್ದೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸ್ಪಷ್ಟಪಡಿಸಿದ್ದಾರೆ. 2014ರ ಕಾಣಿಯೂರು ಪರ್ಯಾಯ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳು ಪರ್ಯಾಯ ಮೆರವಣಿಗೆ ಹಾಗೂ ದರ್ಬಾರ್ ಎರಡರಲ್ಲೂ ಭಾಗವಹಿಸಿರಲಿಲ್ಲ. ಪುತ್ತಿಗೆ ಶ್ರೀಗಳ ಹೇಳಿಕೆ ಕುರಿತಂತೆ ಸುದ್ದಿಗಾರರು ಪೇಜಾವರ ಶ್ರೀಗಳ ಅಭಿಪ್ರಾಯ ಕೇಳಿದಾಗ, ನನಗೆ ಈ ಬಗ್ಗೆ ನಿಮ್ಮಿಂದಷ್ಟೇ ತಿಳಿಯಿತು. ಈ ಬಗ್ಗೆ ವಿಚಾರ ಮಾಡಬೇಕಾಗಿದೆ. ಉಳಿದ ಮಠಗಳ ಸ್ವಾಮೀಜಿಗಳೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಸಮಸ್ಯೆಯನ್ನು ಸಾಮರಸ್ಯದಿಂದ ಬಗೆಹರಿಸುವ ವಿಶ್ವಾಸವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News