×
Ad

ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದು ನಿಜವೇ?

Update: 2016-01-17 00:29 IST

ಹೌದೆನ್ನುತ್ತವೆ ವೆಬ್‌ಸೈಟ್ ಬಿಡುಗಡೆ ಮಾಡಿದ ಸಾಕ್ಷಗಳು
ಲಂಡನ್, ಜ. 16: ನೇತಾಜಿ ಸುಭಾಶ್ಚಂದ್ರ ಬೋಸ್‌ರ ಸಾವಿನ ಸುತ್ತ ಹಬ್ಬಿಕೊಂಡಿರುವ ನಿಗೂಢತೆಯನ್ನು ಬಯಲಿಗೆಳೆಯಲು ರಚಿಸಲಾಗಿರುವ ವೆಬ್‌ಸೈಟೊಂದು ಬಿಡುಗಡೆ ಮಾಡಿರುವ ನೂತನ ಸಾಕ್ಷಗಳು, ನೇತಾಜಿ ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದ ಪರಿಣಾಮವಾಗಿ ಮೃತಪಟ್ಟರು ಎನ್ನುವುದನ್ನೇ ಖಚಿತಪಡಿಸುವಂತಿವೆ.
 ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ)ಯ ಸ್ಥಾಪಕ ತೈಪೆಯ ವಾಯು ಕ್ಷೇತ್ರವೊಂದರ ಹೊರವಲಯದಲ್ಲಿ ನಡೆದ ವಿಮಾನ ಅಪಘಾತದ ಬಳಿಕ 1945 ಆಗಸ್ಟ್ 18ರಂದು ಮೃತಪಟ್ಟರು ಎಂಬುದನ್ನು ಐವರು ಸಾಕ್ಷಿಗಳು ಖಚಿತಪಡಿಸಿದ್ದಾರೆ ಎಂದು ವೆಬ್‌ಸೈಟ್ ಹೇಳಿದೆ. ಖಚಿತ ಪಡಿಸಿರುವ ಸಾಕ್ಷಿಗಳೆಂದರೆ ನೇತಾಜಿಯ ಒಬ್ಬರು ನಿಕಟವರ್ತಿ, ಇಬ್ಬರು ಜಪಾನ್ ವೈದ್ಯರು, ಓರ್ವ ಅನುವಾದಕ ಮತ್ತು ಓರ್ವ ತೈವಾನ್ ನರ್ಸ್.
www.bosefiles.info ‘‘1945 ಆಗಸ್ಟ್ 18ರ ರಾತ್ರಿ ಬೋಸ್ ಇಹಲೋಕ ತ್ಯಜಿಸಿದರು ಎಂಬ ವಿಷಯದಲ್ಲಿ ಈ ಐವರು ಸಾಕ್ಷಿಗಳ ನಡುವೆ ಯಾವುದೇ ಭಿನ್ನಮತವಿರಲಿಲ್ಲ’’ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.


ಶಾಶ್ವತ ಅಪ್ರಜ್ಞಾವಸ್ಥೆಗೆ ಜಾರಿದರು

1946ರ ಮೇ ಮತ್ತು ಜುಲೈ ನಡುವೆ ಬ್ರಿಟಿಶ್ ಸೇನೆಯ ಲೆ.ಕ. ಜೆ.ಜಿ. ಫಿಗಸ್, ಘಟನೆಯ ಬಗ್ಗೆ ಟೋಕಿಯೊದಲ್ಲಿ ಆರು ಜಪಾನಿ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದರು. ಈ ಪೈಕಿ ಜಪಾನಿ ವೈದ್ಯ ಟೊಯೋಶಿ ಸುರುಟ ಒಬ್ಬರು. ಅವರು ಅಪಘಾತ ಸ್ಥಳಕ್ಕೆ ಸಮೀಪದಲ್ಲಿದ್ದ ನನ್ಮೋನ್ ಸೇನಾ ಆಸ್ಪತ್ರೆಯಲ್ಲಿ ಇದ್ದರು. ಅಪಘಾತದ ಬಳಿಕ ನೇತಾಜಿಯನ್ನು ಇದೇ ಆಸ್ಪತ್ರೆಗೆ ಸೇರಿಸಲಾಗಿತ್ತು.

‘‘ಇಡೀ ರಾತ್ರಿ ನೀವು ನನ್ನೊಂದಿಗೆ ಕುಳಿತುಕೊಳ್ಳುವಿರೇ ಎಂದು ಬೋಸ್ ನನ್ನಲ್ಲಿ ಇಂಗ್ಲಿಷ್‌ನಲ್ಲಿ ಕೇಳಿದರು’’ ಎಂದು ಡಾ. ಸುರುಟ, ಫಿಗಸ್‌ಗೆ ನೀಡಿದ ಹೇಳಿಕೆಯಲ್ಲಿ ಹೇಳಿದ್ದಾರೆ. ‘‘ಆದಾಗ್ಯೂ, ಸಂಜೆ ಏಳು ಗಂಟೆಯ ಬಳಿಕ ಅವರು ಪ್ರಜ್ಞೆ ಕಳೆದುಕೊಂಡರು. ವೈದ್ಯರು ಮತ್ತೊಮ್ಮೆ ಕ್ಯಾಂಫರ್ ಇಂಜೆಕ್ಷನ್ ನೀಡಿದರೂ ಅವರು ಅಪ್ರಜ್ಞಾವಸ್ಥೆಗೆ ಜಾರಿದರು ಹಾಗೂ ಸ್ವಲ್ಪವೇ ಹೊತ್ತಿನ ಬಳಿಕ ಇಹಲೋಕ ತ್ಯಜಿಸಿದರು’’.
ಈ ಹೇಳಿಕೆಯನ್ನು ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಸಾನ್ ಪಿ ಶಾ 1946ರ ಸೆಪ್ಟಂಬರ್‌ನಲ್ಲಿ ಮುಂಬೈಯ ‘ಫ್ರೀ ಪ್ರೆಸ್ ಜರ್ನಲ್’ನ ಪತ್ರಕರ್ತ ಹರೀನ್ ಶಾಗೆ ಖಚಿತಪಡಿಸಿದರು.


ಟೆಲಿಗ್ರಾಂನಲ್ಲೂ ನೇತಾಜಿ ಸಾವಿನ ಉಲ್ಲೇಖ

1945 ಸೆಪ್ಟಂಬರ್‌ನಲ್ಲಿ ಭಾರತದ ಎರಡು ಗುಪ್ತಚರ ತಂಡಗಳು ತನಿಖೆ ನಡೆಸುವುದಕ್ಕಾಗಿ ಬ್ಯಾಂಕಾಕ್, ಸೈಗಾನ್ ಮತ್ತು ತೈಪೆಗಳಿಗೆ ಹೋದವು. ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿದ್ದಾರೆ ಎನ್ನುವ ನಿರ್ಧಾರಕ್ಕೆ ಈ ತಂಡಗಳು ಬಂದವು.

ಜಪಾನ್ ಸರಕಾರ ಮತ್ತು ನೇತಾಜಿಯ ‘ಸ್ವತಂತ್ರ ಭಾರತದ ಪ್ರಾಂತೀಯ ಸರಕಾರ’ಗಳ ನಡುವಿನ ಸಮನ್ವಯಕ್ಕಾಗಿ ಸ್ಥಾಪಿಸಲಾಗಿರುವ ಸಂಸ್ಥೆ ಹಿಕರಿ ಕಿಕನ್‌ಗೆ ಜಪಾನ್‌ನ ದಕ್ಷಿಣದ ಸೇನೆಯ ಮುಖ್ಯಸ್ಥರು ಕಳುಹಿಸಿದ ಟೆಲಿಗ್ರಾಂನ ಪ್ರತಿಯೊಂದನ್ನು ತನಿಖಾ ತಂಡಗಳು ವಶಪಡಿಸಿಕೊಂಡವು.
1945 ಆಗಸ್ಟ್ 20ರ ಈ ಟೆಲಿಗ್ರಾಂನಲ್ಲಿ ಐಎನ್‌ಎ ನಾಯಕನಿಗೆ ‘ಟಿ’ ಎಂಬ ಸಂಕೇತಾಕ್ಷರ ಬಳಸಲಾಗಿತ್ತು. ಸಂದೇಶ ಹೀಗಿದೆ: ‘ಟಿ’ ರಾಜಧಾನಿ (ಟೋಕಿಯೊ)ಗೆ ಪ್ರಯಾಣಿಸುತ್ತಿದ್ದಾಗ, ತೈಹೋಕು (ತೈಪೆಗೆ ಜಪಾನಿ ಹೆಸರು)ನಲ್ಲಿ 18ರಂದು ಮಧ್ಯಾಹ್ನ 2 ಗಂಟೆಗೆ ಅವರ ವಿಮಾನ ಅಪಘಾತಕ್ಕೀಡಾಗಿದ್ದು ಅವರು ಗಂಭೀರವಾಗಿ ಗಾಯಗೊಂಡರು ಹಾಗೂ ಅದೇ ದಿನ ಮಧ್ಯ ರಾತ್ರಿ ಮೃತಪಟ್ಟರು.

‘ನನ್ನ ಕೊನೆ ಸಮೀಪಿಸುತ್ತಿದೆ’

ನೇತಾಜಿಯ ಆಪ್ತ ಸಹಾಯಕರಾಗಿದ್ದ ಕರ್ನಲ್ ಹಬೀಬುರ್ರಹ್ಮಾನ್ ಖಾನ್ ವಿಮಾನ ಅಪಘಾತದ ದಿನದಂದು ಅವರ ಜೊತೆಗೇ ಇದ್ದರು ಹಾಗೂ ಅಪಘಾತದಲ್ಲಿ ಬದುಕುಳಿದರು. ಅಪಘಾತ ನಡೆದ ಆರು ದಿನಗಳ ಬಳಿಕ, ಅಂದರೆ 1945 ಆಗಸ್ಟ್ 24ರಂದು ಸಹಿ ಹಾಕಿದ ಲಿಖಿತ ಹೇಳಿಕೆಯೊಂದನ್ನು ಅವರು ನೀಡಿದರು. ಬೋಸ್ ತನ್ನೊಂದಿಗೆ ಮಾತನಾಡಿದ ಕೊನೆಯ ಮಾತುಗಳ ಬಗ್ಗೆ ಅವರು ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
 ‘‘ತನ್ನ ಕೊನೆ ಸಮೀಪಿಸುತ್ತಿದೆ ಎಂದು ಅವರು ಸಾವಿಗೆ ಮುನ್ನ ನನ್ನೊಂದಿಗೆ ಹೇಳಿದರು. ತನ್ನ ದೇಶವಾಸಿಗಳಿಗೆ ಸಂದೇಶವೊಂದನ್ನು ನೀಡುವಂತೆ ಅವರು ನನ್ನನ್ನು ಕೋರಿದರು. ಅವರ ಸಂದೇಶ ಹೀಗಿದೆ: ‘ಭಾರತದ ಸ್ವಾತಂತ್ರಕ್ಕಾಗಿ ನಾನು ಕೊನೆಯವರೆಗೆ ಹೋರಾಡಿದೆ. ಈಗ ಅದೇ ಪ್ರಯತ್ನದಲ್ಲಿ ನಾನು ನನ್ನ ಪ್ರಾಣವನ್ನು ಕೊಡುತ್ತಿದ್ದೇನೆ. ದೇಶವಾಸಿಗಳೇ! ಸ್ವಾತಂತ್ರ ಹೋರಾಟವನ್ನು ಮುಂದುವರಿಸಿ. ಭಾರತ ಸ್ವತಂತ್ರಗೊಳ್ಳಲು ಹೆಚ್ಚು ಸಮಯ ಬೇಕಿಲ್ಲ. ಆಝಾದ್ ಹಿಂದ್ ಚಿರಾಯುವಾಗಲಿ’ ’’.

 ---------------------------------------------------------------------------------------------

ನೇತಾಜಿ ಮತ್ತು ಅವರ ಆಪ್ತ ಹಬೀಬುರ್ರಹ್ಮಾನ್ ಖಾನ್ 1945 ಆಗಸ್ಟ್ 17ರಂದು ಮಧ್ಯಾಹ್ನ 2 ಗಂಟೆಗೆ ಸೈಗಾನ್ ವಿಮಾನ ನಿಲ್ದಾಣದಲ್ಲಿ ಏರಿದ ಮಿತ್ಸುಬಿಶಿ ಕಿ-21 ಯುದ್ಧ ವಿಮಾನ. ಇದೇ ವಿಮಾನ ಮರುದಿನ ಅಪಘಾತಕ್ಕೀಡಾಗಿ ನೇತಾಜಿ ಮೃತಪಟ್ಟರೆನ್ನಲಾಗಿದೆ.

-----------------------------------------------------------------------------------------------

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News