ಶಾಸಕರ ವಿರುದ್ಧ ಹೈಕೋರ್ಟ್‌ಗೆ ಪಿಐಎಲ್
ಉಡುಪಿ: ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಸೇರಿದಂತೆ 11 ಮಂದಿ ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಳಿಸಿರುವುದು ಅಕ್ರಮ ಹಾಗೂ ಅಸಂವಿಧಾನಿಕವಾಗಿದ್ದು, ತಕ್ಷಣ ಎಲ್ಲರನ್ನೂ ಆ ಪದವಿಯಿಂದ ವಿಮುಕ್ತಿಗೊಳಿಸಿ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಕೆಜೆಪಿ ಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಸ್ಥಾನಮಾನ ಹೊಂದಿರುವ ಈ 11 ಮಂದಿಯಿಂದ ರಾಜ್ಯದ ಖಜಾನೆಗೆ ನಷ್ಟವೇ ಹೊರತು, ಬೇರೆ ಯಾವುದೇ ಉಪಯೋಗವಿಲ್ಲ. 11 ಮಂದಿ ಶಾಸಕರನ್ನು ಖುಷಿ ಪಡಿಸಲು ಈ ನೇಮಕ ಮಾಡಲಾಗಿದೆ. ಇದರಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ಇದರ ವಿರುದ್ಧ ಕೆಜೆಪಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆ ಎಂದರು.
ಅರ್ಜಿಯನ್ನು ಸ್ವೀಕರಿಸಿರುವ ರವಿ ಮಳಿಮಠ್ ಹಾಗೂ ಸುಬ್ರತೋ ರಾವ್ ಮುಖರ್ಜಿ ಅವರನ್ನೊಳಗೊಂಡ ನ್ಯಾಯಾಲಯದ ಪೀಠ ಕಳೆದ ಸೋಮವಾರ ಸರಕಾರ ಹಾಗೂ 11 ಮಂದಿ ಸಂಸದೀಯ ಕಾರ್ಯದರ್ಶಿಗಳಿಗೆ ನೋಟಿಸು ಜಾರಿಗೊಳಿಸಿದೆ ಎಂದು ಪ್ರಸನ್ನ ನುಡಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೇ ರೀತಿ 24 ಮಂದಿಯನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸಿರುವುದನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಪಡಿಸಿ, ನೇಮಕವನ್ನು ಅಸಾಂವಿಧಾನಿಕ ಎಂದು ಸಾರಿತ್ತು ಎಂದವರು ಹೇಳಿದರು.