ಸಿಯರಾ ಲಿಯೋನ್‌ನಲ್ಲಿ ಮತ್ತೆ ಎಬೋಲ: 109 ಮಂದಿಯನ್ನು ಪ್ರತ್ಯೇಕಿಸಿದ ಅಧಿಕಾರಿಗಳು
ಫ್ರೀಟೌನ್ (ಸಿಯರಾ ಲಿಯೋನ್), ಜ. 17: ಪಶ್ಚಿಮ ಆಫ್ರಿಕ ಎಬೋಲ ಮುಕ್ತ ಎಂಬ ಘೋಷಣೆಯಾದ ಎರಡೇ ದಿನಗಳಲ್ಲಿ ಸಿಯರಾ ಲಿಯೋನ್‌ನಲ್ಲಿ 100ಕ್ಕೂ ಅಧಿಕ ಮಂದಿಯನ್ನು ಪ್ರತ್ಯೇಕವಾಗಿ ಇಡಲಾಗಿದೆ. ಎಬೋಲ ಸೋಂಕಿನಿಂದಾಗಿ ಹೊಸ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಗಿನಿ ದೇಶದ ಗಡಿ ಸಮೀಪ ವಾಸಿಸುತ್ತಿದ್ದ 22 ವರ್ಷದ ಮಹಿಳೆಯೊಬ್ಬರು ಕಳೆದ ವಾರ ಮೃತಪಟ್ಟಿದ್ದು, ಅವರ ಸಾವಿಗೆ ಎಬೋಲ ಸೋಂಕು ಕಾರಣ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಖಚಿತಪಡಿಸಿತ್ತು.
ಎಬೋಲ ಸೋಂಕಿನ ಅತ್ಯಂತ ಗಂಭೀರ ಪರಿಸ್ಥಿತಿಯನ್ನು ಎದುರಿಸಿದ ಮೂರು ದೇಶಗಳ ಪೈಕಿ ಲೈಬೀರಿಯ ಎಬೋಲ ಸೋಂಕು ಮುಕ್ತವಾಗಿದೆ ಎನ್ನುವುದನ್ನು ಕೊನೆಯದಾಗಿ ಖಚಿತಪಡಿಸಲಾಯಿತು. ಹಾಗೂ ಆ ಬಳಿಕ, ಪಶ್ಚಿಮ ಆಫ್ರಿಕ ಸೋಂಕು ಮುಕ್ತವಾಗಿದೆ ಎಂದು ಘೋಷಿಸಲಾಯಿತು. ಸಿಯರಾ ಲಿಯೋನ್‌ಗೆ ಕಳೆದ ವರ್ಷದ ನವೆಂಬರ್‌ನಲ್ಲೇ ರೋಗಮುಕ್ತ ಪ್ರಮಾಣಪತ್ರ ನೀಡಲಾಗಿತ್ತು ಹಾಗೂ ಗಿನಿ ಡಿಸೆಂಬರ್‌ನಲ್ಲಿ ರೋಗ ಮುಕ್ತಗೊಂಡಿತ್ತು.
ವಿದ್ಯಾರ್ಥಿನಿಯ ಸಾವಿಗೆ ಮುನ್ನ ಅವರೊಂದಿಗೆ ಸಂಪರ್ಕದಲ್ಲಿದ್ದ ಒಟ್ಟು 109 ಮಂದಿಯನ್ನು ಪ್ರತ್ಯೇಕವಾಗಿ ಇಡಲಾಗಿದೆ ಎಂದು ಫ್ರೀಟೌನ್‌ನಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದರು.