ಮಾನವ ಸಾಗಣೆದಾರರ ಲಾಭ 40,000 ಕೋಟಿ ರೂ.
ನಿರಾಶ್ರಿತರ ಹತಾಶೆಯ ಪ್ರಯೋಜನ ಪಡೆದುಕೊಳ್ಳುವ ಕ್ರಿಮಿನಲ್ ಗುಂಪುಗಳು
ಲಂಡನ್, ಜ. 17: ನಿರಾಶ್ರಿತರ ಹತಾಶೆಯನ್ನು ನಗದೀಕರಿಸಿಕೊಂಡು ಮಾನವ ಕಳ್ಳಸಾಗಣೆದಾರರು ಕಳೆದ ವರ್ಷ ಬರೋಬ್ಬರಿ 20,000 ಕೋಟಿ ರೂಪಾಯಿಯಿಂದ 40,000 ಕೋಟಿ ರೂಪಾಯಿಯಷ್ಟು ದಾಖಲೆಯ ಲಾಭವನ್ನು ಗಳಿಸಿದ್ದಾರೆ ಎಂದು ಐರೋಪ್ಯ ಒಕ್ಕೂಟದ ಕಾನೂನು ಅನುಷ್ಠಾನ ಸಂಸ್ಥೆ ‘ಯುರೋಪಲ್’ ಸಂಘಟನೆಯ ಮುಖ್ಯಸ್ಥರು ಹೇಳಿದ್ದಾರೆ.
ಮಾನವ ಕಳ್ಳಸಾಗಣೆ ವ್ಯವಹಾರ ಈಗ ಯುರೋಪ್‌ನ ಕಳ್ಳ ವ್ಯವಹಾರ ಸಂಸ್ಥೆಗಳ ಅತ್ಯಂತ ಸಮೃದ್ಧ ವ್ಯವಹಾರವಾಗಿದೆ ಹಾಗೂ ಇದು ಅಕ್ರಮ ಮಾದಕ ದ್ರವ್ಯಗಳ ವ್ಯವಹಾರಕ್ಕೆ ನಿಕಟ ಪೈಪೋಟಿ ನೀಡುವ ಸನಿಹಕ್ಕೆ ಬಂದಿದೆ ಎಂದು ರಾಬ್ ವೇನ್‌ರೈಟ್ ಹೇಳಿದರು.ಈ ಸಂಸ್ಥೆಯು 1,500 ಆಶ್ರಯ ಕೋರಿಕೆದಾರರು, ನಿರಾಶ್ರಿತರು ಮತ್ತು ಆರ್ಥಿಕ ವಲಸಿಗರನ್ನು ಸಂದರ್ಶಿಸಿದ್ದು, ಅವರ ಪೈಕಿ 90 ಶೇ. ಮಂದಿ ಯುರೋಪ್ ತಲುಪಲು ಕ್ರಿಮಿನಲ್ ಗ್ಯಾಂಗ್‌ಗಳಿಗೆ ಹಣ ಕೊಟ್ಟಿದ್ದಾರೆ ಎಂಬುದನ್ನು ಕಂಡುಕೊಂಡಿದೆ.
ಯುದ್ಧ, ಬಡತನ ಮತ್ತು ಪ್ರತೀಕಾರದ ಭಯದ ಕಾರಣಗಳಿಂದಾಗಿ ಕಳೆದ ವರ್ಷ 10 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಪ್ರಾಣಗಳನ್ನು ಒತ್ತೆಯಾಗಿಟ್ಟು ಯುರೋಪ್‌ಗೆ ರಹಸ್ಯ ಪ್ರಯಾಣ ಕೈಗೊಂಡಿದ್ದಾರೆ ಎಂಬುದಾಗಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆ ಅಂದಾಜಿಸಿದೆ. ಅಂದರೆ, ತುಂಬಾ ಮಂದಿ ತುಂಬಾ ಹಣ ಮಾಡಿದ್ದಾರೆ ಎಂದು ವೇನ್‌ರೈಟ್ ತಿಳಿಸಿದರು.
ಕ್ರಿಮಿನಲ್ ಮಾನವ ಕಳ್ಳಸಾಗಾಟ ಜಾಲಗಳು ಸಹಾರ ಆಫ್ರಿಕದಿಂದ ಸ್ಕಾಂಡಿನೇವಿಯದವರೆಗೆ ಹಬ್ಬಿವೆ. ಸಾವಿರಾರು ಮಂದಿ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ವರ್ಷ ವೊಂದರಲ್ಲೇ ಯುರೋಪಲ್ 10,700 ಶಂಕಿತರನ್ನು ಗುರುತಿಸಿದೆ. ನಕಲಿ ಪಾಸ್‌ಪೋರ್ಟ್‌ಗಳನ್ನು ತಯಾರಿಸುವ ಸಣ್ಣ ಕ್ರಿಮಿನಲ್‌ಗಳಿಂದ ಹಿಡಿದು ದೇಶಗಳಾಚೆ ಮತ್ತು ಗಡಿಗಳಾಚೆ ವಲಸಿಗರನ್ನು ಕರೆದುಕೊಂಡು ಹೋಗುವ ಟ್ಯಾಕ್ಸಿ ಚಾಲಕರು ಮತ್ತು ಸಂಘಟಿತ ಅಪರಾಧ ಗುಂಪುಗಳವರೆಗೆ ಜನರು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ.