×
Ad

ಭಯಮುಕ್ತ ವಾತಾವರಣವೇ ನನ್ನ ಗುರಿ: ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್

Update: 2016-01-18 00:28 IST

ಮಂಗಳೂರು, ಜ.17: ‘‘ಸಮಾಜದ ಜನರಿಗೆ ರಕ್ಷಣೆ ನೀಡುವುದು ಪೊಲೀಸ್ ಇಲಾಖೆಯ ಕರ್ತವ್ಯ. ಅದನ್ನು ಆಯುಕ್ತನಾಗಿ ಸಮರ್ಥ ವಾಗಿ ನಾನು ನಿರ್ವಹಿಸಲಿದ್ದೇನೆ. ಜೊತೆಗೆ ಯಾರೂ ಕಾನೂನು ಕೈಗೆತ್ತಿಕೊಳ್ಳಲು ಅಥವಾ ಜನರಲ್ಲಿ ಭಯ ಅಥವಾ ದ್ವೇಷ ಹುಟ್ಟಿಸಲು ಅವಕಾಶ ನೀಡದೆ, ಭಯಮುಕ್ತ ವಾತಾವರಣ ಕಲ್ಪಿಸುವುದೇ ನನ್ನ ಗುರಿ...’’ ಇದು ಮಂಗಳೂರು ನಗರದ ನೂತನ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ನಗರದ ಜನತೆಗೆ ನೀಡುವ ಆಶ್ವಾಸನೆ. 
ಜ.3ರಂದು ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದ ಚಂದ್ರಶೇಖರ್ ಜನ ಸ್ನೇಹಿ ಪೊಲೀಸ್ ತನ್ನ ಗುರಿ ಎಂದು ಹೇಳಿ ಕೊಂಡಿದ್ದರು. ಈ ಬಗ್ಗೆ ‘ವಾರ್ತಾಭಾರತಿ’ ಪ್ರತಿನಿಧಿ ಅವರೊಂದಿಗೆ ನಡೆಸಿದ ಸಂದರ್ಶನ ದಲ್ಲಿ ವ್ಯಕ್ತವಾದ ಅಭಿಪ್ರಾಯ ಇಲ್ಲಿದೆ. 
ಪ್ರಶ್ನೆ: ಜನಸ್ನೇಹಿ ಪೊಲೀಸ್ ಎಂದರೆ ಹೇಗೆ? ಜನರ ಅಪೇಕ್ಷೆಯನ್ನು ಯಾವ ರೀತಿ ಈಡೇರಿಸುವಿರಿ?
ಚಂದ್ರಶೇಖರ್: ಜನಸ್ನೇಹಿ ಪೊಲೀಸ್ ಎಂದರೆ ಜನರ ಬೇಡಿಕೆಗಳನ್ನು ಅರಿತು ಕೊಳ್ಳುವುದು, ಜನರು ಪೊಲೀಸರ ಮೇಲೆ ವಿಶ್ವಾಸವಿಟ್ಟಾಗ ಮತೀಯ ಶಕ್ತಿಗಳನ್ನು ಪ್ರತ್ಯೇ ಕಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಜನರು ಹಿಂಸೆಗೂ ಇಳಿಯುವುದಿಲ್ಲ. ಅವರು ತಮ್ಮ ದೇನೇ ಸಮಸ್ಯೆಗಳಿದ್ದರೂ ಅದನ್ನು ಪೊಲೀಸರ ಜೊತೆ ಹೇಳಲು ಮುಂದಾಗುತ್ತಾರೆ. ಹಾಗಾಗಿ ಜನಸ್ನೇಹಿ ಪೊಲೀಸ್ ಎಂದಾಗ ಮೊದಲು ಜನರ ವಿಶ್ವಾಸ ಗಳಿಸಬೇಕಾಗುತ್ತದೆ. ಆ ಪ್ರಯತ್ನ ಮಾಡಲಾಗುವುದು. 
ಪ್ರಶ್ನೆ: ಅದಕ್ಕೇನಾದರೂ ಹೊಸ ಯೋಜನೆ ಇದೆಯೇ?
ಚಂದ್ರಶೇಖರ್: ಜನಸ್ನೇಹಿ ಪೊಲೀಸ್‌ಗಾಗಿ ಹೊಸ ಯೋಜನೆ ಬೇಕಾಗಿಲ್ಲ. ಇರುವ ವ್ಯವಸ್ಥೆಯನ್ನೇ ಉತ್ತಮವಾಗಿ ನಿರ್ವಹಿಸಿದರೆ ಸಾಕು. ಇಲಾಖೆಯಲ್ಲಿ ಈಗಾಗಲೇ ಜಾರಿ ಯಲ್ಲಿರುವ ಸಮುದಾಯ ಪೊಲೀಸ್ ವ್ಯವಸ್ಥೆ ಯನ್ನೇ ಅಚ್ಚುಕಟ್ಟಾಗಿ ನಿರ್ವಹಿಸಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವ ಜನಿಕರ ಜತೆ ಸಂಪರ್ಕ ಇರಿಸಿಕೊಳ್ಳಲಾ ಗುವುದು. 
ಪ್ರಶ್ನೆ: ಸಿಎಆರ್ (ಸಿಟಿ ಆರ್ಮ್ಡ್ ರಿಸರ್ವ್) ನೇಮಕಾತಿ ಆಗಲಿದೆಯೇ?
 ಚಂದ್ರಶೇಖರ್: ನೇಮಕಾತಿಗೆ ನೋಟಿಫಿಕೇ ಶನ್ ಆಗಿದೆ. ಈ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ. 
ಪ್ರಶ್ನೆ: ಪೊಲೀಸ್ ಕಮಿಷನರೇಟ್ ಆದ ಬಳಿಕ ಹೊಸ ಠಾಣೆಯ ಪ್ರಸ್ತಾಪ ಇದೆಯೇ?
ಚಂದ್ರಶೇಖರ್: ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಹೊಸತಾಗಿ ಮಾಡುವ ಪ್ರಸ್ತಾಪ ಇದೆ.
ಪ್ರಶ್ನೆ: ಗಾಂಜಾ-ಮಾದಕದ್ರವ್ಯಗಳ ಹಾವಳಿ ತಡೆಗೆ ಏನು ಕ್ರಮ?
ಚಂದ್ರಶೇಖರ್: ಸಾಮಾನ್ಯವಾಗಿ ಗಾಂಜಾ ಪ್ರಕರಣಗಳಲ್ಲಿ ಸಾಗಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ನಾವು ಅದರ ಮೂಲವನ್ನು ಪತ್ತೆಹಚ್ಚಿ ತನಿಖೆ ಮಾಡಿ, ಹಣ ಮತ್ತು ಸೊತ್ತನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಲಾ ಗುವುದು. ಆ ಮೂಲಕ ಈ ಹಾವಳಿಯನ್ನು ತಡೆಯಲಾಗುವುದು. 
ಪ್ರಶ್ನೆ: ಹವಾಲಾ ವ್ಯವಹಾರದ ಬಗ್ಗೆ ನಿಗಾ ವಹಿಸಲಾಗುತ್ತಿದೆಯೇ?
ಚಂದ್ರಶೇಖರ್: ಹವಾಲಾ ಜಾಲದ ಬಗ್ಗೆ ನಾವೇನಾದರೂ ಕ್ರಮ ಕೈಗೊಳ್ಳಬೇಕಾದರೂ ಜಾರಿ ನಿರ್ದೇಶನಾಲಯ (ಇನ್‌ಫೋರ್ಸ್ ಮೆಂಟ್ ಡೈರೆಕ್ಟೊರೇಟ್) ಮತ್ತು ಆದಾಯ ತೆರಿಗೆ (ಇನ್‌ಕಂ ಟ್ಯಾಕ್ಸ್) ಅಧಿಕಾರಿ ಗಳನ್ನು ಜೊತೆ ಸೇರಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. 
ಪ್ರಶ್ನೆ: ನಿಮ್ಮ ಬಗ್ಗೆ ಒಂದಿಷ್ಟು ಹೇಳುವಿರಾ? ಐಟಿಯಿಂದ ಪೊಲೀಸ್ ಕ್ಷೇತ್ರ ಆಯ್ಕೆ ಹೇಗೆ? ಯಾಕೆ?
ಚಂದ್ರಶೇಖರ್: ಬಾಲ್ಯದಲ್ಲೇ ಪೊಲೀಸ್ ಯುನಿಫಾರಂ ಹಾಕಿಕೊಳ್ಳಬೇಕೆಂಬ ಇಚ್ಛೆ ಇತ್ತು. ಹಾಗಾಗಿ ಎಂಜಿನಿಯರಿಂಗ್ ಪದವಿ ಪಡೆದರೂ ಪೊಲೀಸ್ ಇಲಾಖೆಯ ಬಗ್ಗೆ ಒಲವಿದ್ದ ಕಾರಣ ಐಪಿಎಸ್ ಮಾಡಿ ಈ ಕ್ಷೇತ್ರವನ್ನು ಆಯ್ಕೆ ಮಾಡಿದೆ. ಈ ಕ್ಷೇತ್ರದಲ್ಲಿ ಸವಾಲು ಜಾಸ್ತಿ ಇದೆಯಾದರೂ, ಜನರ ಜೊತೆ ನೇರವಾಗಿ ಬೆರೆಯಲು ಇದಕ್ಕಿಂತ ಉತ್ತಮ ಅವಕಾಶ ಬೇರೆ ಇಲ್ಲ ಎಂಬುದು ನನ್ನ ಭಾವನೆ. 
ಪ್ರಶ್ನೆ: ಪೊಲೀಸ್ ಆಗಿ ತೃಪ್ತಿ ಇದೆಯೇ?
ಚಂದ್ರಶೇಖರ್: ಸಾಕಷ್ಟಿದೆ. ವೈದ್ಯರನ್ನು ಹೊರತುಪಡಿಸಿದರೆ, ತೊಂದರೆಯಲ್ಲಿರುವ ವರಿಗೆ ತಕ್ಷಣ ಪರಿಹಾರ ನೀಡುವವರು ಪೊಲೀಸರು. ಸಮಾಜದಲ್ಲಿ ಬಲಿಷ್ಠರಿಂದ ದುರ್ಬಲರಿಗೆ ಅನ್ಯಾಯ ಆದಾಗ ತಕ್ಷಣ ಸ್ಪಂದಿಸುವವರು ಪೊಲೀಸರು. ಪೊಲೀಸರಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಸಾಧ್ಯ. ಹಾಗಾಗಿ ಇಂತಹ ಸೇವೆಯಿಂದ ಸಿಗುವ ತೃಪ್ತಿ ಇತರ ಯಾವುದೇ ವೃತ್ತಿ, ಸೇವೆಯಿಂದ ಸಿಗಲು ಸಾಧ್ಯ ಇಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.
ಪ್ರಶ್ನೆ: ಮೂಲತ: ಆಂಧ್ರ ಪ್ರದೇಶದವರಾದ ನಿಮಗೆ ಕರ್ನಾಟಕದ ಬಗೆಗಿನ ಅಭಿಪ್ರಾಯ? ಅನುಭವ?
ಚಂದ್ರಶೇಖರ್: ನನ್ನ ಪತ್ನಿ ಕರ್ನಾಟಕದ ತುಮಕೂರಿನ ಪಾವಗಡದವರು. ಕರ್ನಾಟಕದ ಜನ ಹೊರಗಿನವರನ್ನು ಬಹು ಬೇಗನೆ ಸ್ವೀಕರಿಸಿ, ತಮ್ಮವರನ್ನಾಗಿಸುತ್ತಾರೆ. ಇಲ್ಲಿನ ಜನರ ವಿಚಾರಧಾರೆಗಳು, ಚಿಂತನೆಗಳು ಕೂಡಾ ವಿಶಾಲವಾದುದು. ಅದಕ್ಕಾಗಿಯೇ ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸಲು, ಇಲ್ಲಿ ನೆಲೆಸಲು, ಇಲ್ಲಿ ಕಲಿಯಲು ಇತರ ರಾಜ್ಯಗಳ ಜನರು ಸದಾ ಉತ್ಸುಕರಾಗಿರುತ್ತಾರೆ.

ಆಂಧ್ರ ಪ್ರದೇಶದಿಂದ- ಕರ್ನಾಟಕದವರೆಗೆ!
ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯವರಾದ ಚಂದ್ರಶೇಖರ್, ಐಐಟಿ ಖರಗ್‌ಪುರ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವೈಮಾನಿಕ ಎಂಜಿನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಬಳಿಕ ಸುಮಾರು ಒಂದೂವರೆ ವರ್ಷಗಳ ಕಾಲ ಬೆಂಗಳೂರಿನ ಇನ್ಫೋಸಿಸ್‌ನಲ್ಲಿ ಉದ್ಯೋಗ ಮಾಡಿರುವ ಇವರು, 1998ರಲ್ಲಿ ಹರ್ಯಾಣ ತಂಡದ ಐಪಿಎಸ್ ಅಧಿಕಾರಿಯಾಗಿ ನೇಮಕಕೊಂಡಿದ್ದರು. ಆನಂತರ ಶಿಮ್ಲಾದ ಸಹಾಯಕ ಎಸ್ಪಿಯಾಗಿ ಪೊಲೀಸ್ ಸೇವೆ ಆರಂಭಿಸಿದ್ದರು. ಹರ್ಯಾಣದ ರಾಜ್ಯಪಾಲರ ಭದ್ರತಾ ಅಧಿಕಾರಿಯಾಗಿ, ಅಲ್ಲಿನ ಬಿಲಾಸ್‌ಪುರ ಮತ್ತು ಮಂಡಿ ಜಿಲ್ಲೆಗಳ ಎಸ್ಪಿಯಾಗಿ ಸೇವೆ ಸಲ್ಲಿಸಿರುವ ಅನುಭವವೂ ಇವರಿಗಿದೆ. 2009ರಲ್ಲಿ ನಿಯೋಜನೆ ಮೇರೆಗೆ ಕರ್ನಾಟಕ ಪೊಲೀಸ್ ಇಲಾಖೆಗೆ ಆಗಮಿಸಿದ ಅವರು, 3 ತಿಂಗಳ ಕಾಲ ಆಂತರಿಕ ಭದ್ರತಾ ವಿಭಾಗದ ಎಸ್ಪಿಯಾಗಿದ್ದರು. 2009ರಿಂದ 2012ರವರೆಗೆ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಮತ್ತು 2012ರಿಂದ 2014ರವರೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಐಜಿ ಹುದ್ದೆ ನಿರ್ವಹಿಸಿರುವ ಚಂದ್ರಶೇಖರ್, 2014ರಿಂದ ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಹುದ್ದೆಯಲ್ಲಿದ್ದು, ಇದೀಗ ಮಂಗಳೂರು ಪೊಲೀಸ್ ಆಯುಕ್ತರಾಗಿ ಜ.3ರಂದು ಅಧಿಕಾರ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News