ದ.ಕ.- ಉಡುಪಿ: ಪಲ್ಸ್ ಪೋಲಿಯೊ ಲಸಿಕೆಗೆ ಚಾಲನೆ

Update: 2016-01-17 18:59 GMT

ಮಂಗಳೂರು, ಜ.17: ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನ ದಂಗವಾಗಿ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಹಲವು ವರ್ಷಗಳ ಹಿಂದೆ ಜಿಲ್ಲೆಯ ಜನರನ್ನು ಕಾಡುತ್ತಿದ್ದ ಮಾರಕ ಕಾಯಿಲೆಗಳಲ್ಲಿ ಒಂದಾದ ಪೋಲಿಯೊ ಕಾಯಿಲೆಯನ್ನು ತಡೆಗಟ್ಟಲು ಸಾಕಷ್ಟು ಪ್ರಯತ್ನದ ಫಲವಾಗಿ ಬಹತೇಕ ಯಶಸ್ವಿಯಾಗಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಮಾರಕ ಕಾಯಿಲೆ ಮತ್ತೆ ಬಾರದಂತೆ ಎಚ್ಚರಿಕೆ ವಹಿಸಬೇಕಾದ ಹೊಣೆಗಾರಿಕೆ ಸಮಾಜದ ಎಲ್ಲರ ಮೇಲಿದೆ ಈ ನಿಟ್ಟಿನಲ್ಲಿ ಪೋಷಕರು ಐದು ವರ್ಷ ದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೊ ತಡೆಗಟ್ಟುವ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮನಪಾ ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್, ಜಿಪಂ ಸಿಇಒ ಶ್ರೀವಿದ್ಯಾ, ಮನಪಾ ಆಯುಕ್ತ ಗೋಪಾಲಕೃಷ್ಣ, ಮನಪಾ ಸದಸ್ಯ ಪ್ರಕಾಶ್ ಸಾಲ್ಯಾನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ, ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜೇಶ್ವರಿದೇವಿ ಉಪಸ್ಥಿತರಿದ್ದರು.


ದ.ಕ.ದಲ್ಲಿ ಶೇ.89.75 ಸಾಧನೆ 
ರವಿವಾರ ದ.ಕ. ಜಿಲ್ಲೆಯಲ್ಲಿ ಒಟ್ಟು 1,50,975 ಮಕ್ಕಳಿಗೆ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡುವ ಮೂಲಕ ಶೇ 89.75 ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಮಂಗಳೂರು ತಾಲೂಕಿನಲ್ಲಿ ಶೇ.83.08, ಬಂಟ್ವಾಳ ಶೇ.94.80, ಪುತ್ತೂರು ಶೇ.95.83, ಸುಳ್ಯ ಶೇ.91.25, ಬೆಳ್ತಂಗಡಿ ತಾಲೂಕಿನಲ್ಲಿ ಶೇ.97.66 ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡಲಾಗಿದೆ. ಈ ಬಾರಿಯ ಪ್ರಥಮ ಹಂತದ ಪಲ್ಸ್ ಪೋಲಿಯೊ ಲಸಿಕೆ ಹಾಕಲು 1,68,223 ಮಕ್ಕಳನ್ನು ಗುರುತಿಸಲಾಗಿದೆ. 2ನೆ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮ ಫೆ.22ರಂದು ಜಿಲ್ಲೆಯಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದರು.


ಉಡುಪಿ, ಜ.17: ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರವಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಭಾಪತಿ, ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯ ಡಾ.ಕಿಶೋರಿ, ಮಕ್ಕಳ ತಜ್ಞ ಡಾ.ಅಮರನಾಥ ಶಾಸ್ತ್ರಿ ಉಪಸ್ಥಿತರಿದ್ದರು.
 ರೋಟರಿ ಅಧ್ಯಕ್ಷ ಡಾ.ಪ್ರಭಾಕರ ಮಲ್ಯ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸರ್ಜನ್ ಡಾ.ಮಹೇಂದ್ರ ವಂದಿಸಿದರು.
ಪೇಜಾವರ ಶ್ರೀಯಿಂದ ಮಗುವಿಗೆ ಲಸಿಕೆ: ಪರ್ಯಾಯ ಪೀಠಾರೋಹಣ ಮಾಡಲಿರುವ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಇಂದು ಮಗುವಿಗೆ ಪೋಲಿಯೊ ಲಸಿಕೆ ಹಾಕಿದರು.
ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಆಗಮಿಸಿದ್ದ ಸ್ವಾಮೀಜಿ ಐದು ವರ್ಷದೊಳಗಿನ ಮಗುವಿಗೆ ಲಸಿಕೆಯನ್ನು ಹಾಕಿದರು. ಈ ಸಂದರ್ಭ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News