‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ- 2016’
ಮಂಗಳೂರು, ಜ.17: ಆಶಾಜ್ಯೋತಿ ಅಶಕ್ತ ಮಕ್ಕಳ ಮತ್ತು ಹೆತ್ತವರ ವೇದಿಕೆಯ ವತಿಯಿಂದ ರವಿವಾರ ನಗರದ ಡೊಂಗರಕೇರಿಯ ಕೆನರಾ ಪ್ರೌಢಶಾಲಾ ಆವರಣದಲ್ಲಿ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ-2016’ ಜರಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ವಿಶಿಷ್ಟ ಮಕ್ಕಳನ್ನು ಸಮಾಜದ ಇತರ ಮಕ್ಕಳಂತೆ ಕಾಣುವಂತಾಗಬೇಕು ಎಂದರು.
ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿದೇವಿ ಮಾತನಾಡಿ, ಮೇಳದಲ್ಲಿ ಅಂಗವಿಕಲರ ಗುರುತಿನ ಚೀಟಿ ದೊರೆ ಯುವಂತೆ ಮಾಡಿರುವುದು ಶ್ಲಾಘನೀಯ ಎಂದರು.
ಕಾರ್ಪೊರೇಶನ್ ಬ್ಯಾಂಕ್‌ನ ಪ್ರಬಂಧಕ ಲಕ್ಷ್ಮೀನಾಥ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಿಬ್ಬಂದಿ ಅನ್ನಪೂರ್ಣಾ ಮತ್ತು ವೆಂಕಟೇಶ್ ಉಪಸ್ಥಿತರಿದ್ದರು. ಇದೇವೇಳೆ ಸಂತ ಆ್ಯಗ್ನೆಸ್ ವಿಶೇಷ ಮಕ್ಕಳ ಶಾಲೆಯ ಮುಹಮ್ಮದ್ ಫರ್ದೀನ್ ಮತ್ತು ಎಸ್‌ಡಿಎಂ ಸಮಗ್ರ ಶಾಲೆಯ ಸಂಗೀತ ಶಿಕ್ಷಕಿ ಕಸ್ತೂರಿಯವರನ್ನು ಸನ್ಮಾನಿಸಲಾಯಿತು. ದ.ಕ. ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘದ ಅಧ್ಯಕ್ಷ ಡಾ.ಮುರಳೀಧರ ನಾಯಕ್ ಸ್ವಾಗತಿಸಿದರು. ಪ್ರಕಾಶ್ ಪೈ ವಂದಿಸಿದರು. ಎಂ.ಶ್ರೀನಿವಾಸ್ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುನ್ನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಿಂದ ಡೊಂಗರಕೇರಿ ಪ್ರೌಢಶಾಲಾ ಆವರಣದವರೆಗೆ ಮೆರವಣಿಗೆ ನಡೆಯಿತು.