×
Ad

ಟೆನಿಸ್‌ಗೂ ಅಂಟಿದ ಮ್ಯಾಚ್ ಫಿಕ್ಸಿಂಗ್ ನಂಟು ವಿಶ್ವವನ್ನು ಬೆಚ್ಚಿ ಬಿಳಿಸುವ ವರದಿ ಬಹಿರಂಗ

Update: 2016-01-18 10:08 IST

  ಲಂಡನ್, ಜ.18: ಜಾಗತಿಕ ಕ್ರೀಡೆಗಳಾದ ಫುಟ್ಬಾಲ್, ಕ್ರಿಕೆಟಿಗೆ ಮ್ಯಾಚ್ ಫಿಕ್ಸಿಂಗ್‌ನ ಕೊಳೆ ಅಂಟಿಕೊಂಡಿರುವಂತೆ, ಇದೀಗ ಟೆನಿಸ್‌ಗೂ ಫಿಕ್ಸಿಂಗ್‌ನ ಕರಿನೆರಳು ಆವರಿಸಿದೆ. ಕಳೆದ 10 ವರ್ಷಗಳಲ್ಲಿ ಟೆನಿಸ್ ರ್ಯಾಂಕಿಂಗ್‌ನಲ್ಲಿ ಅಗ್ರ 50ರಲ್ಲಿ ಸ್ಥಾನ ಗಿಟ್ಟಿಸಿಕೊಂಡ 16ಕ್ಕೂ ಅಧಿಕ ಆಟಗಾರರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆಂಬ ಸ್ಫೋಟಕ ವರದಿಯನ್ನು ಬಿಬಿಸಿ ಮತ್ತು ಆನ್‌ಲೈನ್ ಬಝ್‌ಫೀಡ್ ಇಂದು ಪ್ರಕಟಿಸಿದೆ.

ಆದರೆ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆಟಗಾರರ ವಿವರವನ್ನು ಬಿಬಿಸಿ ಬಹಿರಂಗಪಡಿಸಿಲ್ಲ.
 2016ನೆ ಸಾಲಿನ ಆಸ್ಟ್ರೇಲಿಯನ್ ಓಪನ್ ಆರಂಭಗೊಂಡಿರುವ ಹೊತ್ತಿಗೆ ಬಹಿರಂಗಗೊಂಡಿರುವ ಟೆನಿಸ್ ಜಗತ್ತಿನ ಮೋಸದಾಟದ ವರದಿ ಟೆನಿಸ್ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಟೆನಿಸ್ ಜಗತ್ತಿನ ದಂತಕತೆಗಳನ್ನು ಅನುಮಾನದಂತೆ ನೋಡುವಂತಾಗಿದೆ.
   ಕಳೆದ ಹತ್ತು ವರ್ಷಗಳಿಂದ ಮೋಸದಾಟದಲ್ಲಿ ಹಲವು ಮಂದಿ ಟೆನಿಸ್ ಸ್ಟಾರ್‌ಗಳು ಭಾಗಿಯಾಗಿರುವುದು ಗೊತ್ತಿದ್ದರೂ ಇಂಟೆಗ್ರಿಟಿ ಯುನಿಟ್(ಟಿಐಯು) ಕಣ್ಣು ಮುಚ್ಚಿಕೊಂಡಿದೆ. ಆಟಗಾರರ ಮೇಲೆ ಯಾವುದೇ ಕ್ರಮಕೈಗೊಳ್ಳಲು ಮುಂದಾಗಿಲ್ಲ ಎಂದು ಬಿಬಿಸಿ ವರದಿಯಲ್ಲಿ ಆರೋಪಿಸಲಾಗಿದೆ.
ಗ್ರಾನ್ ಸ್ಲಾಮ್ ಜಯಿಸಿದ ಆಟಗಾರರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರೂ, ಅವರು ಸುರಕ್ಷಿತವಾಗಿ ಟೆನಿಸ್‌ನಲ್ಲಿದ್ದಾರೆ. 2007ರಲ್ಲಿ ಪುರುಷರ ಟೆನಿಸ್ ಪಂದ್ಯಾವಳಿಯ ವೇಳೆ ಎಟಿಪಿ ಕಲೆ ಹಾಕಿರುವ ಮಾಹಿತಿಯನ್ನಾಧರಿಸಿ ಬಿಬಿಸಿ ಫಿಕ್ಸಿಂಗ್ ವರದಿಯನ್ನು ಹೊರಗೆಡವಿದೆ.
ರಷ್ಯಾ, ಇಟಲಿ, ಸಿಸಿಲಿ ದೇಶಗಳಲ್ಲಿ ಬೆಟ್ಟಿಂಗ್ ಸಿಂಡಿಕೇಟ್‌ಗಳು ಪಂದ್ಯಗಳನ್ನು ಫಿಕ್ಸ್ ಮಾಡುತ್ತಿವೆ. ತನಿಖಾಧಿಕಾರಿಗಳಿಗೆ ಈ ಎಲ್ಲ ವಿಚಾಗಳು ಗೊತ್ತಿದ್ದರೂ ಸ್ಟಾರ್ ಆಟಗಾರರ ಮೋಸದಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಮನ ಹರಿಸಿಲ್ಲ ಎಂದು ಆರೋಪಿಸಲಾಗಿದೆ.
 ವಿಂಬಲ್ಡನ್‌ನಲ್ಲಿ ಮೂರು ಪಂದ್ಯಗಳು ಫಿಕ್ಸ್ ಆಗಿತ್ತು ಎಂದು ಬಿಬಿಸಿ ಹೇಳಿದೆ. ಱ‘‘ 2008ರಲ್ಲಿ 28 ಆಟಗಾರರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ತನಿಖಾ ಸಂಸ್ಥೆ ಮಾಹಿತಿ ಕಲೆ ಹಾಕಿತ್ತು.ಆದರೆ ಮುಂದೆ ಹೆಚ್ಚಿನ ತನಿಖೆ ನಡೆಯಲಿಲ್ಲ ’’ ಎಂದು ಬಿಬಿಸಿ ತಿಳಿಸಿದೆ.
 2009ರಲ್ಲಿ ಕ್ರೀಡಾರಂಗದಲ್ಲಿ ಭ್ರಷ್ಟಾಚಾರ ತಡೆಗಟ್ಟುವ ಉದ್ದೇಶಕ್ಕಾಗಿ ಭ್ರಷ್ಟಾಚಾರ ನಿಗ್ರಹ ಸಂಹಿತೆ ಜಾರಿಗೆ ಬಂದಿತ್ತು. ಆದರೆ ಟೆನಿಸ್‌ನ ಫಿಕ್ಸಿಂಗ್ ಮೇಲೆ ಪರಿಣಾಮ ಆಗಿಲ್ಲ ಎಂದು ಹೇಳಲಾಗಿದೆ.
ಪ್ರಸ್ತುತ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುತ್ತಿರುವ ಎಂಟು ಆಟಗಾರರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವುದಾಗಿ ಬಿಬಿಸಿ ವರದಿ ತಿಳಿಸಿದೆ.

ಮೊದಲು ಫಿಕ್ಸಿಂಗ್ ಆಹ್ವಾನ ಬಂದಿತ್ತು: ಜೊಕೊವಿಕ್
 ವೃತ್ತಿ ಬದುಕಿನ ಆರಂಭದಲ್ಲಿ ಪಂದ್ಯವೊಂದರಲ್ಲಿ ಫಿಕ್ಸಿಂಗ್‌ಗೆ ಕೋರಿದ್ದರು. ಆದರೆ ಫಿಕ್ಸಿಂಗ್‌ಗೆ ನೇರವಾಗಿ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಿಕಟವರ್ತಿಯೊಬ್ಬರ ಮೂಲಕ ಫಿಕ್ಸಿಂಗ್‌ಗೆ ಕರೆ ಬಂದಿತ್ತು ಎಂದು ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಹೇಳಿದ್ದಾರೆ.
 2007ರಲ್ಲಿ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ತಾನು ಪ್ರಥಮ ಸುತ್ತಿನಲ್ಲೇ ನಿರ್ಗಮಿಸಲು ಫಿಕ್ಸರ್‌ಗಳು ಬಯಸಿದ್ದರು ಎಂದು ಜೊಕೊವಿಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News