ಪ್ರವಾಸೋದ್ಯಮದ ಬೆಳವಣಿಗೆಗೆ ಸಿಆರ್‌ಝಡ್ ತಡೆ: ಪ್ರಮೋದ್
ಉಡುಪಿ, ಜ.18: ದೇಶವೊಂದರ ಆರ್ಥಿಕ ಪ್ರಗತಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಪ್ರವಾಸೋದ್ಯಮ ಕ್ಷೇತ್ರ ಅತ್ಯಂತ ಪ್ರಮುಖವಾದುದು. ಆದರೆ ಭಾರತದಲ್ಲಿ ಅತೀ ನಿರ್ಲಕ್ಷ್ಯಕ್ಕೆ ಒಳಗಾದ ಕ್ಷೇತ್ರ ಕೂಡಾ ಇದೇ ಆಗಿದೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಚೇಂಬರ್ಸ್ ಆ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಹೋಟೆಲ್ ಡಯಾನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ‘ಸರ್ವರಿಗಾಗಿ ಉಡುಪಿ ಪ್ರವಾಸೋದ್ಯಮ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿಶ್ವದ ಬಹಳಷ್ಟು ದೇಶಗಳು ಆರ್ಥಿಕ ಪ್ರಗತಿಗಾಗಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿವೆ. ಇವುಗಳಲ್ಲಿ ಇಂಡೋನೇಷ್ಯಾದ ಬಾಲಿ ಕೂಡಾ ಒಂದು. ಅಲ್ಲಿ ಸಮುದ್ರ ತೀರವನ್ನು ಬಿಟ್ಟು ಮತ್ತೇನಿಲ್ಲ. ಅವರು ಅದನ್ನೇ ಬಳಸಿಕೊಂಡು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದ್ದಾರೆ. ಹೀಗಾಗಿ ಅಲ್ಲಿ ಪ್ರತಿ ಐದು ನಿಮಿಷಕ್ಕೊಂದು ದೇಶೀಯ ಅಥವಾ ಅಂತಾರಾಷ್ಟ್ರೀಯ ವಿಮಾನ ಅಲ್ಲಿ ಇಳಿಯುತ್ತದೆ.ಒಟ್ಟು 3,600ಕಿ.ಮೀ.ನಷ್ಟು ಕಡಲ ತೀರವನ್ನು ಹೊಂದಿರುವ ಭಾರತದಲ್ಲಿ ಅಂಥ ಸಾವಿರ ಬಾಲಿಗಳನ್ನು ರೂಪಿಸಬಹುದು. ಆದರೆ ನಮಗೆ ಅದು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ಭಾರತದಲ್ಲಿ ಇದಕ್ಕಿರುವ ಪ್ರಮುಖ ತಡೆ ಎಂದರೆ ಇಲ್ಲಿನ ಸಿಆರ್‌ಝಡ್ ಆ್ಯಕ್ಟ್. ಸಿಆರ್‌ಝೆಡ್ ಎನ್ನುವುದು ಬಹುತೇಕ ರಾಷ್ಟ್ರಗಳಲ್ಲಿ ಇಲ್ಲ. ಇರುವ ಕೆಲವು ರಾಷ್ಟ್ರಗಳಲ್ಲೂ ಸಮುದ್ರದ ಉಬ್ಬರದ ವೇಳೆ ನೀರು ಬರುವಲ್ಲಿಂದ ಕೇವಲ 10ಮೀ.ನವರೆಗೆ ಮಾತ್ರ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅವಕಾಶವಿಲ್ಲ. ಆದರೆ ಭಾರತದಲ್ಲಿ 500ಮೀ.ವರೆಗೂ ವಿಸ್ತರಣೆಗೊಂಡಿದೆ. ಇದರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರಮೋದ್ ಹೇಳಿದರು.