×
Ad

ನೂತನ ಪಿಡಿಪಿ-ಬಿಜೆಪಿ ಸರಕಾರ ರಚನೆ ಭಾರೀ ವಿಳಂಬವಾಗುತ್ತಿದೆ: ಉಮರ್ ಅಬ್ದುಲ್ಲಾ

Update: 2016-01-18 23:35 IST

ಶ್ರೀನಗರ, ಜ.18: ಬಿಜೆಪಿ-ಪಿಡಿಪಿ ಮೈತ್ರಿ ಈಗಾಗಲೇ ಆಗಿರುವ ನಿರ್ಧಾರವಾಗಿದ್ದರೂ, ರಾಜ್ಯದಲ್ಲಿ ಸರಕಾರ ರಚನೆಗೆ ಅತಿಯಾದ ವಿಳಂಬವಾಗುತ್ತಿದೆಯೆಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಪಿಡಿಪಿ-ಬಿಜೆಪಿ ‘ಮೈತ್ರಿಯ ಕಾರ್ಯಸೂಚಿ ಪವಿತ್ರ ದಾಖಲೆಯೆಂದು’ ಪಿಡಿಪಿ ಘೋಷಿಸಿದೆ. ಪಿಡಿಪಿಗೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ‘ಆದರದ ಭಯ’ ಮುಂದುವರಿದಿದೆ. ಆದಾಗ್ಯೂ, ಸರಕಾರ ರಚನೆಯಲ್ಲಿ ಅತಿಶಯ ವಿಳಂಬವಾಗಿದೆಯೆಂದು ನಿನ್ನೆ ರಾತ್ರಿ ಅವರು ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
ನಿನ್ನೆ ಸಂಜೆ ಪಿಡಿಪಿ ತನ್ನ ಉನ್ನತ ಸಮಿತಿಯ ಸಭೆಯ ಬಳಿಕ ಬಿಡುಗಡೆ ಮಾಡಿದ್ದ ಹೇಳಿಕೆಯ ಬಗ್ಗೆ ಉಮರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಪಿಡಿಪಿ ರವಿವಾರದ ಸಭೆಯನಂತರ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯು, ಬಿಜೆಪಿ-ಪಿಡಿಪಿ ಮೈತ್ರಿ ಮುಂದುವರಿಯುವುದನ್ನು ರುಜುವಾತುಪಡಿಸಿದೆ. ಪಿಡಿಪಿಯಿಂದ ಯಾವುದೇ ಶರ್ತ ವಿಧಿಸಲ್ಪಟ್ಟಿಲ್ಲ, ಯಾವುದೇ ಸಂಧಾನ ಪ್ರಕ್ರಿಯೆ ನಡೆಯುತ್ತಿಲ್ಲ ಹಾಗೂ ಹೊಸ ಪಿಡಿಪಿ-ಬಿಜೆಪಿ ಸರಕಾರ ರಚನೆ ಅದಾಗಲೇ ನಿರ್ಧರಿಸಲ್ಪಟ್ಟ ವಿಚಾರವಾಗಿದೆ ಎಂದು ನ್ಯಾಶನಲ್ ಕಾನ್ಫರೆನ್ಸ್(ಎನ್.ಸಿ) ಕಾರ್ಯಾಧ್ಯಕ್ಷರೂ ಆಗಿರುವ ಉಮರ್ ಹೇಳಿದ್ದಾರೆ
ಪಿಡಿಪಿಗೆ ಯಾವುದೇ ಕನಿಷ್ಠ ಶ್ರೇಯವನ್ನು ತರುವುದಕ್ಕಾಗಿ ಹಾಗೂ ಕಟ್ಟುನಿಟ್ಟಾದ ನೈತಿಕತೆಯ ಹೊಗೆ ಪರದೆ ಸೃಷ್ಟಿಸುವುದಕ್ಕಾಗಿ ಸರಕಾರ ರಚನೆಗೆ ವಿಳಂಬಿಸಲಾಗುತ್ತಿದೆಯೆನ್ನುವುದು ಸಾಮಾನ್ಯ ಗ್ರಹಿಕೆಯಾಗಿದೆ. ಸಂಯುಕ್ತ ಬಹುಮತವಿರುವ ಎರಡು ರಾಜಕೀಯ ಪಕ್ಷಗಳ ವಿಲಕ್ಷಣ ಹಾಗೂ ಅಭೂತಪೂರ್ವ ಮೈತ್ರಿಯು ಮುಂದುವರಿದಿರುವಾಗಲೂ,ಜಮ್ಮು-ಕಾಶ್ಮೀರದ ಜನರಿಗೆ ಚುನಾಯಿತ ಸರಕಾರವೊಂದು ನಿರಾಕರಿಸಲ್ಪಟ್ಟಿದೆ. ಈ ತೋರಿಕೆ ಹಾಗೂ ರಾಜಕೀಯ ನಾಟಕ ಅನಿಶ್ಚಿತತೆ, ಅಸ್ಥಿರತೆ ಹಾಗೂ ಗೊಂದಲದ ಖರ್ಚಿನಲ್ಲಿ ನಡೆಯುತ್ತಿದೆಯೆಂದು ಅವರು ಟೀಕಿಸಿದ್ದಾರೆ.
ಪಿಡಿಪಿ ಹಾಗೂ ಅದರ ಅಧ್ಯಕ್ಷೆ ಮೆಹಬೂಬ ಮುಫ್ತಿಯವರಿಗೆ ಎರಡು ಆಯ್ಕೆಗಳಿವೆ. ಅವರು, ಒಂದೋ ಜಮ್ಮು-ಕಾಶ್ಮೀರದ ಜನರಿಗೆ ನೀಡಿರುವ ವಾಗ್ದಾನವನ್ನು ಈಡೇರಿಸಬೇಕು, ಇಲ್ಲವೇ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳಬೇಕು.
ಸರಕಾರ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಮೈತ್ರಿ ಹಾಗೂ ಉನ್ನತ ನೈತಿಕತೆಯ ಅಲುಗಾಡದ ಮಾದರಿಯೆಂಬ ನಟನೆ ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎಂಬಂತಾಗಿದೆ. ಮೆಹಬೂಬ ಸಂದರ್ಭಕ್ಕೆ ಎದ್ದು ನಿಲ್ಲಲಾರರೆಂದಾದರೆ ಹಿಂದಿನ 10 ತಿಂಗಳ ಅನುಭವ ಹಾಗೂ ವಿಷಾದದ ಆಧಾರದಲ್ಲಿ ಪಿಡಿಪಿಯು ಬಿಜೆಪಿಯ ಮೈತ್ರಿ ಕಡಿದುಕೊಳ್ಳಲಿ. ತಾವು ಮತ್ತೆ ಹೊಸ ಚುನಾವಣೆಗಾಗಿ ಜನರ ಬಳಿಗೆ ಹೋಗಬಹುದು ಎಂದು ಅಬ್ದುಲ್ಲಾ ಬರೆದಿದ್ದಾರೆ.
ಬಿಜೆಪಿಯೊಂದಿಗೆ ಸರಕಾರ ರಚನೆಯನ್ನು ವಿಳಂಬಿಸಿದಷ್ಟೂ ಮೆಹಬೂಬ ಕೇಂದ್ರದಿಂದ ರಿಯಾಯಿತಿಗಳನ್ನು ತರಬೇಕೆಂದು ಹೆಚ್ಚು ಜನ ನಿರೀಕ್ಷಿಸುತ್ತಾರೆ. ರಾಜಕೀಯ ಅಸ್ಥಿರತೆ ಆವರಿಸಿರುವ ಜಮ್ಮು-ಕಾಶ್ಮೀರದ ಜನ ಸಾಮಾನ್ಯರ ಖರ್ಚಿನಲ್ಲಿ ಈ ರಾಜಕೀಯ ಆಟ ಹಾಗೂ ನಾಟಕಗಳು ನಡೆಯುತ್ತಿವೆಯೆಂಬ ಪ್ರಾಮಾಣಿಕ ನಿರಾಸೆಯೊಂದಿಗೆ ತಾನು ಮೆಹಬೂಬ ರಾಜಕೀಯ ಆಟಕ್ಕೆ ಶುಭ ಕೋರುತ್ತಿದ್ದೇನೆಂದು ಉಮರ್ ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News