ಮುಂಬೈಸ್ಫೋಟ: ಪವಾರ್ ಸಿಡಿಸಿದ 12ನೇ ಬಾಂಬ್!
ಪುಣೆ: ಮುಂಬೈನಲ್ಲಿ 1993ರ ಸರಣಿ ಸ್ಫೋಟದ ವೇಳೆ ಟೆಲಿವಿಷನ್ ಸ್ಟುಡಿಯೊದಿಂದ ಕಳುಹಿಸಿದ್ದ ಬಾಂಬ್ ಒಂದು ಪುಣೆಗೆ 15 ಕಿಲೋಮೀಟರ್ ದೂರದಲ್ಲಿ 22 ವರ್ಷ ಬಳಿಕ ಸ್ಫೋಟಗೊಂಡಿದೆ!
357 ಮಂದಿಯನ್ನು ಬಲಿತೆಗೆದುಕೊಂಡು, 717 ಮಂದಿಯನ್ನು ಗಾಯಗೊಳಿಸಿದ ಮುಂಬೈ ಸರಣಿ ಸ್ಫೋಟ ವಾಸ್ತವವಾಗಿ ನಡೆದದ್ದು 11 ಕಡೆಗಳಲ್ಲಿ. ಆದರೆ ಅಂದಿನ ಮುಖ್ಯಮಂತ್ರಿ ಶರದ್ ಪವಾರ್ ಅವರು, 12 ಕಡೆಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದರು. ಅಂದು ದೇಶಕ್ಕೆ ತಾನು ಏಕೆ ಸುಳ್ಳು ಹೇಳಿದ್ದೆ ಎನ್ನುವುದನ್ನು ಇದೀಗ ಶರದ್ ಪವಾರ್ ಅವರೇ ಬಹಿರಂಗಪಡಿಸಿದ್ದಾರೆ.
ಪಿಂಪ್ರಿಯ ತುಕಾರಾಮನಗರದಲ್ಲಿ ನಡೆಯುತ್ತಿರುವ 89ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಶರದ್ ಈ ಬಾಂಬ್ ಸಿಡಿಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಹೀಗೆ ಸುಳ್ಳು ಹೇಳಿದ್ದೆ ಎಂದು ಪವಾರ್ ಪ್ರಕಟಿಸಿದರು. ಈ ಕ್ರಮವನ್ನು ಶ್ರೀಕೃಷ್ಣ ಆಯೋಗ ಕೂಡಾ ಶ್ಲಾಘಿಸಿತ್ತು.
ಪವಾರ್ ಆ ಘಟನೆಯನ್ನು ಸಮ್ಮೇಳನದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟರು. "1993ರ ಮಾರ್ಚ್ 12ರಂದು ಹಿಂದೂ ಪ್ರಾಬಲ್ಯದ ಪ್ರದೇಶಗಳಲ್ಲಿ 11 ಕಡೆ ಬಾಂಬ್‌ಸ್ಫೋಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದು ದೇಶದಲ್ಲಿ ಕೋಮುಗಲಭೆ ಹರಡಲು ಪಾಕಿಸ್ತಾನ ನಡೆಸಿದ ತಂತ್ರವಾಗಿದ್ದರಿಂದ ತಕ್ಷಣ ದೂರದರ್ಶನ ಸ್ಟುಡಿಯೊಗೆ ಹೋಗಿ 12 ಕಡೆ ಸ್ಫೋಟ ಸಂಭವಿಸಿದೆ ಎಂದು ಪವಾರ್ ಘೋಷಿಸಿದರು. ಪವಾರ್ ಸಿಡಿಸಿದ 12ನೇ ಬಾಂಬ್ ಬಂದರು ಮಸೀದಿಯ ಬಳಿ! ಈ ಘಟನೆಯ ಬಳಿಕ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಇದು ಯಾವುದೇ ಧರ್ಮವನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲ ಎಂದು ಭಾವಿಸಿದರು. ಇದರಿಂದ ಜನಜೀವನ ಸಾಮಾನ್ಯಸ್ಥಿತಿಗೆ ಬರಲು ಸಾಧ್ಯವಾಯಿತು ಎಂದು ಪವಾರ್ ವಿವರಿಸಿದರು.
ಆಡಳಿತದ ಹೊಣೆ ಹೊತ್ತಿರುವಾಗ ಸಾರ್ವಜನಿಕ ಹಿತಾಸಕ್ತಿಯಿಂದ ಸುಳ್ಳು ಹೇಳಬೇಕಾಗುತ್ತದೆ ಎಂದರು. ಶ್ರೀಕೃಷ್ಣ ಆಯೋಗ ಬಂದರ್ ಮಸೀದಿ ಸ್ಫೋಟದ ಬಗ್ಗೆ ಕೇಳಿದಾಗ ಆಯೋಗದ ಬಳಿ ಇದನ್ನು ಬಿಚ್ಚಿಟ್ಟದ್ದರು. ಈ ಬಾಂಬ್ ಹಲವು ಜನರ ಜೀವರಕ್ಷಣೆ ಮಾಡಿತು ಎಂದು ಪವಾರ್ ಹೇಳಿದರು.