ಮಲೇಗಾಂವ್ ಸ್ಫೋಟ ಸಾಕ್ಷಿ ಕಣ್ಮರೆ ಬಗ್ಗೆ ಎನ್‌ಐಎ ತನಿಖೆ
Update: 2016-01-19 08:56 IST
ನವದೆಹಲಿ: ಮಲೇಂಗಾವ್‌ನಲ್ಲಿ 2008ರಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಸಾಕ್ಷಿ ದಿಲೀಪ್ ಪಾಟಿದಾರ್ ಕಣ್ಮರೆಗೆ ಸಂಬಂಧಿಸಿದಂತೆ ನಡೆದ ತನಿಖೆಯ ನಿಯಂತ್ರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಮಹಾರಾಷ್ಟ್ರದ ಮಲೇಗಾಂವ್‌ನಲ್ಲಿ 2008ರ ಸೆಪ್ಟೆಂಬರ್ 29ರಂದು ನಡೆದ ಘಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟ ಸಂಬಂಧ ಎನ್‌ಐಎ ಈಗಾಗಲೇ ತನಿಖೆ ನಡೆಸುತ್ತಿದೆ.
"ಮಲೇಗಾಂವ್ ಸ್ಫೋಟದ ಹಿನ್ನೆಲೆಯಲ್ಲಿ ವಶಪಡಿಸಿಕೊಂಡ ವಸ್ತುಗಳಿಗೂ ಪಾಟೀದಾರ ಕಣ್ಮರೆಗೂ ಸಂಬಂಧವಿದೆ ಎಂಬ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಎನ್‌ಐಎಗೆ ನೀಡುವಂತೆ ಕೋರಲಾಗಿತ್ತು" ಎಂದು ಗೃಹಸಚಿವಾಲಯದ ಮೂಲಗಳು ಹೇಳಿವೆ.
ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರೂ ಆರೋಪಿಯಾಗಿರುವ ಪ್ರಕರಣದಲ್ಲಿ ಪಾಟೀದಾರ್‌ನನ್ನು ಉದ್ದೇಶಪೂರ್ವಕವಾಗಿ ಕಣ್ಮರೆ ಮಾಡಲಾಗಿದೆ ಎಂಬ ಗುಮಾನಿ ಎನ್‌ಐಎಗೆ ಇದೆ ಎನ್ನಲಾಗಿದೆ.