×
Ad

ಮ್ಯಾಚ್ ಫಿಕ್ಸಿಂಗ್ ತನಿಖೆ: ಲಂಕಾ ನಾಯಕ ಮ್ಯಾಥ್ಯೂಸ್ ವಿಚಾರಣೆ

Update: 2016-01-19 19:43 IST

ಕೊಲಂಬೊ, ಜ.19: ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಬುಕ್ಕಿಗಳು ಇಬ್ಬರು ಲಂಕಾ ಆಟಗಾರರನ್ನು ಸಂಪರ್ಕಿಸಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಶ್ರೀಲಂಕಾ ಪೊಲೀಸರು ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್‌ರನ್ನು ಮಂಗಳವಾರ ದೀರ್ಘಕಾಲ ವಿಚಾರಣೆ ನಡೆಸಿತು.
''ಕಳೆದ ಅಕ್ಟೋಬರ್‌ನಲ್ಲಿ ಗಾಲೆಯಲ್ಲಿ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಸೋಲುವಂತೆ ಲಂಕಾದ ಇಬ್ಬರು ಆಟಗಾರರಿಗೆ ಬುಕ್ಕಿಗಳು ಒತ್ತಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ತನಗೆ ಗೊತ್ತಿರುವ ವಿಷಯವನ್ನು ಹೇಳಿದ್ದು, ತನ್ನ ಹೇಳಿಕೆಯನ್ನು ಪೊಲೀಸರ ಆರ್ಥಿಕ ಅಪರಾಧಗಳ ತನಿಖಾ ವಿಭಾಗ(ಎಫ್‌ಸಿಐಡಿ) ಧ್ವನಿಮುದ್ರಣ ಮಾಡಿದೆ. ಇಲ್ಲಿ ಬುಕ್ಕಿಗಳು ಆಟಗಾರರಿಗೆ ಬಲೆ ಬೀಳಿಸಲು ವಿಫಲ ಯತ್ನ ನಡೆಸಿರುವ ಕಾರಣ ಯಾವ ಆಟಗಾರರ ವಿರುದ್ಧವೂ ತನಿಖೆ ನಡೆಯುವುದಿಲ್ಲ'' ಎಂದು ಮ್ಯಾಥ್ಯೂಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
''ಗಾಲೆ ಸ್ಟೇಡಿಯಂನಲ್ಲಿ ನಡೆದ ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ಫಲಿತಾಂಶವನ್ನು ಫಿಕ್ಸ್ ಮಾಡಲು ಬಂದಿದ್ದ ಬುಕ್ಕಿಗಳು ಕುಶಾಲ್ ಪೆರೇರಾ ಹಾಗೂ ರಂಗನ ಹೆರಾತ್‌ರನ್ನು ಸಂಪರ್ಕಿಸಿರುವ ಬಗ್ಗೆ ತನಗೇನು ಗೊತ್ತಿದೆ ಎಂಬ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿರುವ ವಿಷಯವನ್ನು ಆಟಗಾರರು ಖುದ್ದಾಗಿ ಬಹಿರಂಗಪಡಿಸಿದ್ದಾರೆ. ಕ್ರೀಡಾ ಸಚಿವರು ಅಧಿಕೃತ ದೂರು ಸಲ್ಲಿಸಿದ ಬಳಿಕ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ'' ಎಂದು ಮ್ಯಾಥ್ಯೂಸ್ ಹೇಳಿದ್ದಾರೆ.
 ಶ್ರೀಲಂಕಾದ ಪೆರೇರಾ ಹಾಗೂ ಹೆರಾತ್‌ಗೆ ಪಂದ್ಯ ಫಿಕ್ಸ್ ಮಾಡುವಂತೆ 70,000 ಡಾಲರ್ ಲಂಚದ ಆಮಿಷ ಒಡ್ಡಲಾಗಿತ್ತು. ಈ ಇಬ್ಬರು ಆಟಗಾರರು ಲಂಚ ಸ್ವೀಕರಿಸಲು ನಿರಾಕರಿಸಿದ್ದರು ಎನ್ನಲಾಗಿದೆ. ಹಿರಿಯ ಆಟಗಾರ ಹೆರಾತ್ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿ ತಂಡ ಇನಿಂಗ್ಸ್ ಹಾಗೂ ಆರು ರನ್‌ಗಳ ಅಂತರದಿಂದ ಜಯ ಸಾಧಿಸಲು ನೆರವಾಗಿದ್ದರು.
 ಆಟಗಾರರಿಗೆ ಲಂಚ ನೀಡಲು ಯತ್ನಿಸಿರುವ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಸೋಮವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ವೇಗದ ಬೌಲಿಂಗ್ ಕೋಚ್ ಅನುಶಾ ಸಮರನಾಯಕೆ ಅವರನ್ನು ಎರಡು ತಿಂಗಳು ಉಚ್ಚಾಟಿಸಿತ್ತು.
ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿರುವ ಅಜ್ಞಾತ ವ್ಯಕ್ತಿಗಳು ಶ್ರೀಲಂಕಾ ಇಬ್ಬರು ಆಟಗಾರರನ್ನು ಸಂಪರ್ಕಿಸಿ ಲಂಚದ ಆಮಿಷ ಒಡ್ಡಿದ್ದರು ಎಂದು ಕಳೆದ ತಿಂಗಳು ಕ್ರೀಡಾ ಸಚಿವ ಜಯಸೇಖರ ಸುದ್ದಿಸಂಸ್ಥೆಗೆ ಬಹಿರಂಗಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News