ಜಾತಿ ರಾಜಕೀಯದ ಕೂಪ ಹೈದರಾಬಾದ್ ವಿವಿ: 10 ವರ್ಷಗಳಲ್ಲಿ 8 ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ
ಹೈದರಾಬಾದ್, ಜ.19: ಕಳೆದೊಂದು ದಶಕದಲ್ಲಿ ಹೈದರಾಬಾದ್ ವಿವಿಯಲ್ಲಿ ನಡೆದಿರುವ ಸರಣಿ ಆತ್ಮಹತ್ಯೆ ಘಟನೆಗಳು, ದಲಿತ ವಿದ್ಯಾರ್ಥಿಗಳ ವಿರುದ್ಧ ಅಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಸಾಕ್ಷಿಯಾಗಿದೆ ಎಂದು ನಗರದ ಉನ್ನತ ಶಿಕ್ಷಣ ತಜ್ಞರು ಹೇಳುತ್ತಾರೆ.ಹೈದರಾಬಾದ್ ವಿವಿಯಲ್ಲಿ ವ್ಯಾಪಕವಾಗಿ ತಾಂಡ ವವಾಡುತ್ತಿರುವ ಜಾತಿ ರಾಜಕೀಯವನ್ನು ಎದುರಿಸಲಾಗದೆ, ಅಲ್ಲಿ 8 ಮಂದಿ ದಲಿತ ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ.
ಎಂಟು ಮಂದಿಯ ಆತ್ಮಹತ್ಯೆಯೆಂದರೆ, ಸಣ್ಣ ಸಂಖ್ಯೆಯೇನೂ ಅಲ್ಲ. ಆದರೆ, ವಿವಿ ಈವರೆಗೂ ದಲಿತ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ರೋಹಿತ್‌ನ ಸಾವು, ವಿವಿ ಕ್ಯಾಂಪಸ್‌ನಲ್ಲಿ ಬೇರುಬಿಟ್ಟಿರುವ ಜಾತಿ ತಾರತಮ್ಯದಂತಹ ಬೃಹತ್ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದೆಯಷ್ಟೇ ಎಂದವರು ಹೇಳಿದ್ದಾರೆ.
ವಿವಿಯ ಕ್ಯಾಂಪಸ್‌ನಲ್ಲಿ ದಲಿತ ವಿದ್ಯಾರ್ಥಿ ಗಳನ್ನು ಕೀಳಾಗಿ ನೋಡಲಾಗುತ್ತಿದೆ. ಅವರನ್ನು ಅವಮಾನಿಸಲಾಗುತ್ತಿದೆ ಎಂದು ವಿವಿಯ ಕೆಲವು ಶಿಕ್ಷಣತಜ್ಞರು ಹೇಳುತ್ತಾರೆ.
2013ರಲ್ಲಿ ಹೈದರಾಬಾದ್ ವಿವಿಯಲ್ಲಿ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ಎಂ.ವೆಂಕಟೇಶ್ ಎಂಬಾತ, ಕ್ಯಾಂಪಸ್‌ನಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ತಾರತಮ್ಯವನ್ನು ಪ್ರತಿಭಟಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ನೆರವಿನ ಕೊರತೆ, ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಲು ಇನ್ನೊಂದು ಕಾರಣವೆಂದು, ಶಿಕ್ಷಣತಜ್ಞರು ಹೇಳುತ್ತಾರೆ. ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಅನೇಕ ದಲಿತ ವಿದ್ಯಾರ್ಥಿಗಳು ಮಧ್ಯದಲ್ಲೇ ಶಿಕ್ಷಣವನ್ನು ತೊರೆಯುವಂತಹ ಪರಿಸ್ಥಿತಿಯಿದೆಯೆಂದು ಅವರು ತಿಳಿಸುತ್ತಾರೆ.
‘‘ಸರಕಾರವು ದಲಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ಒದಗಿಸುತ್ತದೆಯಾದರೂ, ಫೆಲೊಶಿಪ್‌ಗಳ ವಿತರಣೆಯಲ್ಲಿ ಉಂಟಾಗುವ ವಿಳಂಬದಿಂದಾಗಿ, ಅನೇಕ ಸಂಶೋಧನಾ ವಿದ್ಯಾರ್ಥಿಗಳು, ಮಧ್ಯದಲ್ಲೇ ನಿರ್ಗಮಿಸುತ್ತಾರೆ. ರೋಹಿತ್‌ನ ಆತ್ಮಹತ್ಯೆ ಇದಕ್ಕೊಂದು ಉತ್ತಮ ಉದಾಹರಣೆ. ಆತನಿಗೆ ಬಹಳಸಮಯದಿಂದ ಫೆಲೋಶಿಪ್ ದೊರೆತಿ ರಲಿಲ್ಲವೆಂದು ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿ ನಾಯಕ ಲೆನಿನ್ ಕುಮಾರ್ ಹೇಳುತ್ತಾರೆ.