ವಿರೋಧದ ಮಧ್ಯೆ ಬಾರ್‌ಗೆ ಅನುಮತಿ ನೀಡಿದ ಅಧಿಕಾರಿ: ಮೂಡುಬಿದಿರೆ ಪುರಸಭಾ ಸದಸ್ಯರ ಆಕ್ರೋಶ
ಮೂಡುಬಿದಿರೆ, ಜ.19: ಇಲ್ಲಿನ ಗಾಂಧಿನಗರದ ದಲಿತ ಕಾಲನಿಯ ಬಳಿ ಶಾಲಾ-ಕಾಲೇಜಿನ ಪರಿಸರದಲ್ಲಿ ಬಾರ್ ತೆರೆದು ಮದ್ಯ ಮಾರಾಟ ಮಾಡಲು ಈ ಹಿಂದೆ ನಡೆದ ಪುರಸಭಾಧಿವೇಶನದಲ್ಲಿ ಸದಸ್ಯರು ವಿರೋಧಿಸಿದ್ದರೂ ಕೂಡ ಪುರಸಭೆಯ ಮುಖ್ಯಾಧಿಕಾರಿ ನಿರಾಕ್ಷೇಪಣಾ ಪತ್ರ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು ಈ ಬಗ್ಗೆ ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರ ನಡೆದ ಮೂಡುಬಿದಿರೆ ಪುರಸಭೆಯ ಮಾಸಿಕ ಸಭೆಯಲ್ಲಿ ಒತ್ತಾಯಿಸಿದರು.
5ನೆ ವಾರ್ಡ್‌ನ ಕಡ್ದಬೆಟ್ಟುವಿನಿಂದ ಸ್ವರಾಜ್ಯ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ 65 ಮೀ. ಚರಂಡಿಗೆ 2,61,611 ಲಕ್ಷ ರೂ.ನ ಕಾಮಗಾರಿ ಗುತ್ತಿಗೆದಾರ ಕಣ್ಣನ್ ನಿರ್ವಹಿಸಿದ್ದಾರೆ ಎಂದು ಖರ್ಚುವೆಚ್ಚದ ಪ್ರತಿಯಲ್ಲಿ ತೋರಿಸಲಾಗಿದೆ. ಆದರೆ ಈ ಕಾಮಗಾರಿಯನ್ನು ಆಳ್ವಾಸ್ ಸಂಸ್ಥೆಯವರು ಮಾಡಿಕೊಟ್ಟಿರುತ್ತಾರೆ. ಪುರಸಭೆಯಿಂದ ಮಾಡದ ಕಾಮಗಾರಿಗೆ ಹೇಗೆ ಈ ಮೊತ್ತ ಪಾವತಿಸಲಾಗಿದೆ ಎಂದು ಸದಸ್ಯ ನಾಗರಾಜ ಪೂಜಾರಿ ಆರೋಪಿಸಿದರು.
ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಮುಖ್ಯಾಧಿಕಾರಿ ಶೀನ ನಾಯ್ಕಾ ಉಪಸ್ಥಿತರಿದ್ದರು. ಸದಸ್ಯರಾದ ಹನೀಫ್,ಪ್ರೇಮಾ ಸಾಲ್ಯಾನ್, ಸ್ಥಾಯಿ ಸಮಿತಿ ಸದಸ್ಯ ಕೊರಗಪ್ಪ, ಸದಸ್ಯ ದಿನೇಶ್ ಪೂಜಾರಿ, ಹರಿಣಾಕ್ಷಿ, ಬಾಹುಬಲಿ ಪ್ರಸಾದ್, ಪಿ.ಕೆ. ಥೋಮಸ್, ಶೇಖರ್ ಚರ್ಚೆಯಲ್ಲಿ ಪಾಲ್ಗೊಂಡರು.