ದೇಶದ ರೈಲ್ವೆ ಹಳಿಗಳ ಸಾಮರ್ಥ್ಯ ತೀರಾ ಕಡಿಮೆ: ಸುರೇಶ್ ಪ್ರಭು
ಮಣಿಪಾಲ, ಜ.19: ಭಾರತದ ರೈಲುಗಳು ಅತ್ಯಂತ ಕಡಿಮೆ ವೇಗದಲ್ಲಿ ಸಂಚರಿಸುತ್ತಿವೆ. ಇದಕ್ಕೆ ಭಾರತೀಯ ರೈಲ್ವೆ ಹಳಿಗಳ ಮೇಲೆ ರೈಲು ಬಿಡುವಿಲ್ಲದೆ ಸಂಚರಿಸುವುದು ಕಾರಣ ಎಂದು ಕೇಂದ್ರದ ರೈಲ್ವೆ ಸಚಿವ ಸುರೇಶ್ ಪ್ರಭು ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಜಂಟಿ ಆಶ್ರಯದಲ್ಲಿ ಮಣಿಪಾಲದ ಕಂಟ್ರಿ ಇನ್ ಹೊಟೇಲ್‌ನ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಭಾರತದ ರೈಲ್ವೆ ಹಳಿಗಳ ಸಾಮರ್ಥ್ಯ ತೀರಾ ಕಡಿಮೆ ಇದೆ. ಆದರೆ ಈಗ ಅದರ ಮೇಲೆ ಶೇ.150ರಷ್ಟು ರೈಲುಗಳು ಓಡುತ್ತಿವೆ. ದಿಲ್ಲಿ-ಮುಂಬೈ, ದಿಲ್ಲಿ- ಕೋಲ್ಕತ್ತಾ ಈಗ ಅತ್ಯಧಿಕ ರೈಲುಗಳು ಓಡಾಡುವ ಹಳಿಗಳಾಗಿವೆ. ಇಂಥ ಹಳಿಗಳಲ್ಲಿ ಇನ್ನಷ್ಟು ರೈಲುಗಳನ್ನು ಓಡಿಸುವುದು ಅಸಾಧ್ಯ. ಇದಕ್ಕಾಗಿ ದೇಶಾದ್ಯಂತ ರೈಲ್ವೆ ಹಳಿಗಳನ್ನು ದ್ವಿಪಥಗೊಳಿಸುವ ಕಾರ್ಯ ನಡೆಯುತ್ತಿದೆ ಎಂದವರು, ಕೊಂಕಣ ರೈಲ್ವೆ ಮಾರ್ಗದಲ್ಲಿ ಹೆಚ್ಚು ರೈಲು ಓಡಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಉಡುಪಿ ಚೇಂಬರ್ಸ್ ಹಾಗೂ ಸಣ್ಣ ಕೈಗಾರಿಕಾ ಸಂಘಗಳ ಪರವಾಗಿ ಹಲವು ಬೇಡಿಕೆಗಳ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಕೊಂಕಣ ರೈಲ್ವೆಯ ಸಿಎಂಡಿ ಸಂಜಯ್ ಗುಪ್ತ ಉಪಸ್ಥಿತರಿದ್ದರು. ಉಡುಪಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಶ್ರೀಕೃಷ್ಣ ಕೊಡಂಚ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಭಟ್ ವಂದಿಸಿದರು. ಡಾ.ವಿಜಯೇಂದ್ರ ವಸಂತ್ ಕಾರ್ಯಕ್ರಮ ನಿರೂಪಿಸಿದರು.