ಕರ್ಣಾಟಕ ಬ್ಯಾಂಕ್ : ಪ್ರಥಮ 9 ತಿಂಗಳಲ್ಲಿ 309 ಕೋ.ರೂ. ನಿವ್ವಳ ಲಾಭ
ಮಂಗಳೂರು, ಜ.19: ಕರ್ಣಾಟಕ ಬ್ಯಾಂಕ್ ಹಾಲಿ ಆರ್ಥಿಕ ವರ್ಷದಲ್ಲಿ ಕಳೆದ ಡಿಸೆಂಬರ್ ಅಂತ್ಯದ 9 ತಿಂಗಳ ಅವಧಿಯಲ್ಲಿ 309 ಕೋ. ರೂ. ನಿವ್ವಳ ಲಾಭಗಳಿಸಿದೆ. ಡಿಸೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ 96.91 ಕೋ. ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ್ ಭಟ್ ತಿಳಿಸಿದ್ದಾರೆ. 9 ತಿಂಗಳ ಅವಧಿಯಲ್ಲಿ ಬ್ಯಾಂಕ್‌ನ ನಿರ್ವಹಣಾ ಲಾಭ 600.16 ಕೋ.ರೂ., ನಿವ್ವಳ ಬಡ್ಡಿ ಆದಾಯ 877.53 ಕೋ.ರೂನಿಂದ 943.14 ಕೋ.ರೂ.ಗೇರಿತು. ಬ್ಯಾಂಕ್‌ನ ಒಟ್ಟು ವ್ಯವಹಾರ ಶೇ. 9.92ರ ವೃದ್ಧಿಯೊಂದಿಗೆ 82.592 ಕೋ. ರೂ.ಗೇರಿತು. ಠೇವಣಿ 49.664 ಕೋ.ರೂ., ಮುಂಗಡ 32.928 ಕೋ.ರೂ., ನಿವ್ವಳ ಎನ್‌ಪಿಯು ಶೇ. 2.41ರೊಂದಿಗೆ 791 ಕೋ.ರೂ. ಆಗಿರುತ್ತದೆ.
ಮೂರನೆ ತ್ರೈಮಾಸಿಕ ಅವಧಿಯು ಸವಾಲಿನಿಂದ ಕೂಡಿತ್ತು. ಆದರೆ ಬ್ಯಾಂಕ್‌ನ ಪರಿಣಾಮಕಾರಿ ನಿರ್ವಹಣೆಯಿಂದ ಈ ಸವಾಲು ಎದುರಿಸಿ, ತೃಪ್ತಿದಾಯಕ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಬಡ್ಡಿ ಆದಾಯದ ಹೆಚ್ಚಳದಿಂದ ನಿರ್ವಹಣಾ ಲಾಭ ಹೆಚ್ಚಿದೆ. ಮೂಲ ಆಸ್ತಿ ಹೆಚ್ಚಳಕ್ಕೆ ಇದು ನಿದರ್ಶನವಾಗಿದೆ. ಸಂಪೂರ್ಣ ತಾಂತ್ರಿಕತೆ ಅನುಷ್ಠಾನವಾಗುತ್ತಿದೆ. ಈ ಮೂಲಕ ಕೆಬಿಎಲ್ ವಿಶನ್-2020 ಸಾಕಾರಗೊಳ್ಳಲಿದೆ ಎಂದು ಭಟ್, ಬ್ಯಾಂಕ್‌ನ ಸಾಧನೆ ವಿವರಗಳನ್ನು ಪ್ರಕಟಿಸುತ್ತಾ ತಿಳಿಸಿದರು. 702 ಶಾಖೆಗಳು, 1,180 ಎಟಿಎಂಗಳನ್ನು ಕರ್ಣಾಟಕ ಬ್ಯಾಂಕ್ ಹೊಂದಿದ್ದು, ಮುಂದಿನ ಮಾರ್ಚ್ ಅಂತ್ಯಕ್ಕೆ ಅನುಕ್ರಮವಾಗಿ 725 ಮತ್ತು 1,275ಕ್ಕೆ (ಒಟ್ಟು 2,000) ಹೆಚ್ಚಿಸಲು ನಿರ್ಧರಿಸಲಾಗಿದೆ. ತಾಂತ್ರಿಕ ಉನ್ನತೀಕರಣ, ರಫ್ತು ನಿರ್ವಹಣೆ, ಸಾಮಾಜಿಕ ಬ್ಯಾಂಕಿಂಗ್ ಮುಂತಾದ ಸಾಧನೆಗೆ ಬ್ಯಾಂಕ್ ಐಡಿಆರ್‌ಬಿಟಿ, ಎಸೋಶೆಂ, ಎಫ್‌ಐಇಒ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ.