×
Ad

ಶಿಲಾನ್ಯಾಸ ಹಂತದಲ್ಲೇ ಬಾಕಿಯಾದ ಬಾವಿಕ್ಕರೆ ಯೋಜನೆ

Update: 2016-01-20 00:15 IST

    ಕಾಸರಗೋಡು, ಜ.19: ಕಾಸರಗೋಡು ನಗರಸಭೆ ಹಾಗೂ ಸಮೀಪದ ಐದು ಗ್ರಾಪಂ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡಲು 22 ವರ್ಷಗಳ ಹಿಂದೆ ಆರಂಭಿಸಿದ ಬಾವಿಕ್ಕರೆ ಯೋಜನೆ ಇನ್ನೂ ಶಿಲಾನ್ಯಾಸದಲ್ಲೇ ಉಳಿದುಕೊಂಡಿದೆ.

  ಪ್ರತಿ ವರ್ಷ ತಾತ್ಕಾಲಿಕ ಆಣೆಕಟ್ಟು ನಿರ್ಮಿಸಿ ನೀರು ಸರಬಾಜು ಮಾಡುವ ಪ್ರಕ್ರಿಯೆ ನಡೆಯುತ್ತಿದ್ದರೂ ಈ ಯೋಜನೆ ಯಶಸ್ಸು ಕಂಡಿಲ್ಲ. ಶಾಶ್ವತ ಅಣೆಕಟ್ಟು ಇನ್ನೂ ಕಡತಕ್ಕೆ ಸೀಮಿತವಾಗಿದೆ. ಶಾಶ್ವತ ಅಣೆಕಟ್ಟು ನಿರ್ಮಿಸದ ಪರಿಣಾಮ ಪ್ರತಿ ವರ್ಷ ಉಪ್ಪುನೀರನ್ನೇ ಕುಡಿಯುವ ಪರಿಸ್ಥಿತಿ ಜನತೆಯದ್ದಾಗಿದೆ. ಕಾಸರಗೋಡು ನಗರಸಭೆ, ಮುಳಿಯಾರು, ಚೆಂಗಳ, ಮಧೂರು, ಮೊಗ್ರಾಲ್ ಪುತ್ತೂರು ಮೊದಲಾದ ಗ್ರಾಮಸ್ಥರಿಗೆ ಕುಡಿಯುವ ನೀರು ಸರಬರಾಜು ಮಾಡಲು ಪಯಸ್ವಿನಿ ನದಿಯ ಬಾವಿಕ್ಕರೆಯಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆ ಹಾಕಲಾಗಿತ್ತು. ಆದರೆ ತಾತ್ಕಾಲಿಕ ಅಣೆಕಟ್ಟು ನಿರ್ಮಿಸುವುದರಿಂದ ಬೇಸಿಗೆಯಲ್ಲಿ ಒಂದೆರಡು ಮಳೆ ಸುರಿದಲ್ಲಿ ಅಣೆಕಟ್ಟು ಒಡೆದು ಸಮುದ್ರದ ನೀರು ನುಗ್ಗುತ್ತಿದ್ದು ಇದರಿಂದ ಬೇಸಿಗೆ ಕಾಲದಲ್ಲಿ ಉಪ್ಪುನೀರು ಕುಡಿಯಬೇಕಾದ ಸ್ಥಿತಿ ಜನತೆಗೆ ಅನಿವಾರ್ಯವಾಗಿದೆ.

      22 ವರ್ಷದ ಈ ಹಿಂದೆ ಯೋಜನೆಗೆ 98 ಲಕ್ಷ ರೂ. ಮೀಸಲಿಡಲಾಗಿತ್ತು. ಈಗ ಅದು 12.8 ಕೋಟಿ ರೂ.ಗೆ ತಲುಪಿದೆ. ಪ್ರತಿ ವರ್ಷ ಗೋಣಿ ಚೀಲದಲ್ಲಿ ಮರಳು ತುಂಬಿಸಿ ತಾತ್ಕಾಲಿಕ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ವ್ಯಯಿಸುವ ಮೊತ್ತ ಪೋಲಾಗಿ ಹೋಗುತ್ತಿದೆ. ಈ ವರ್ಷವೂ ಇದೆ ಸಮಸ್ಯೆ ಎದುರಾಗಿದೆ.

  2005-06ರಲ್ಲಿ ಒಪ್ಪಂದ ನವೀಕರಿಸಿ ವೆಚ್ಚವನ್ನು 2.6 ಕೋಟಿ ರೂ. ಗೇರಿಸಲಾಗಿತ್ತು. 2010ರಲ್ಲಿ 7.85 ಕೋಟಿ ರೂ., 2015ರಲ್ಲಿ 12.8 ಕೋಟಿ ರೂ. ಯೋಜನೆಗೆ ಅನುದಾನವನ್ನು ಏರಿಕೆ ಮಾಡಿದರೂ ಯೋಜನೆ ಮಾತ್ರ ಕೇವಲ ಆರಂಭ ಹಂತದಲ್ಲೇ ಇದೆ.

  2005ರಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಫಿಲ್ಲರ್‌ಗಳನ್ನು ಹಾಕಲಾಗಿತ್ತು. ಆದರೆ ಗುತ್ತಿಗೆದಾರ ಅರ್ಧದಲ್ಲೇ ಕಾಮಗಾರಿ ಕೈ ಬಿಟ್ಟ ಕಾರಣ ಅಲ್ಲಿಗೆ ಸ್ಥಗಿತಗೊಂಡಿತು. ಹಲವು ತಾಂತ್ರಿಕ ಹಾಗೂ ಇನ್ನಿತರ ಕಾರಣಗಳ ನೆಪವೊಡ್ಡಿ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕೂಡಾ ಇದಕ್ಕೆ ಕಾರಣ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಪ್ರತೀ ವರ್ಷ ಕೋಟ್ಯಂತರ ರೂ. ವೆಚ್ಚ ಮಾಡಿ ತಾತ್ಕಾಲಿಕ ಆಣೆಕಟ್ಟು ನಿರ್ಮಿಸುವ ಬದಲು ಶಾಶ್ವತ ಯೋಜನೆಯನ್ನು ಕೈಗೊಳ್ಳದಿರುವುದರಿಂದ ಈ ಪ್ರದೇಶದ ಸಾವಿರಾರು ಮಂದಿ ಈ ವರ್ಷವೂ ಉಪ್ಪುನೀರನ್ನೇ ಕುಡಿಯಬೇಕಾದ ಸ್ಥಿತಿ ಉಂಟಾಗಿರುವುದರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News