ಬ್ಯಾರಿ ಗಾದೆ, ಒಗಟು, ಜನಪದ ಕತೆ, ಹಾಸ್ಯ ಬರಹ ಆಹ್ವಾನ
ಮಂಗಳೂರು, ಜ.19: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಬ್ಯಾರಿ ಗಾದೆ, ಒಗಟು (ಎದ್‌ರ್‌ಮಸಲೆ), ಚುಟುಕು, ಜನಪದ ಕತೆ, ಹಾಸ್ಯ ಬರಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರಲು ನಿರ್ಧರಿಸಿದೆ.
*ಬ್ಯಾರಿ ಗಾದೆಗಳು : ಬ್ಯಾರಿ ಭಾಷೆಯಲ್ಲಿ ಚಾಲ್ತಿಯಲ್ಲಿರುವ ಹಳೆಯ ಮತ್ತು ಹೊಸ ಬ್ಯಾರಿ ಗಾದೆಗಳು ಹಾಗೂ ಅದರ ತಿರುಳನ್ನು ಸಂಕ್ಷಿಪ್ತವಾಗಿ ಬರೆದು ಕಳುಹಿಸಬೇಕು.
*ಬ್ಯಾರಿ ಒಗಟುಗಳು : ಬ್ಯಾರಿ ಭಾಷೆಯಲ್ಲಿ ಬಳಕೆಯಲ್ಲಿರುವ ಹಳೆಯ ಮತ್ತು ಹೊಸ ಬ್ಯಾರಿ ಒಗಟು (ಎದ್‌ರ್ ಮಸಲೆ)ಗಳನ್ನು ಪ್ರಶ್ನೋತ್ತರ ಸಮೇತ ಕಳುಹಿಸಬೇಕು.
*ಬ್ಯಾರಿ ಚುಟುಕು : 4 ಅಥವಾ 6 ಸಾಲುಗಳಿಗೆ ಮೀರದ ಬ್ಯಾರಿ ಚುಟುಕುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಕಳುಹಿಸಿಕೊಡುವುದು. *ಬ್ಯಾರಿ ಜನಪದ ಕತೆಗಳು:- ಹಿರಿಯರಿಂದ ತಿಳಿದುಕೊಂಡ ಬ್ಯಾರಿ ಜನಪದ ಕತೆಗಳನ್ನು ಸಂಗ್ರಹಿಸಿ ಕಳುಹಿಸಿಕೊಡುವುದು.
*ಬ್ಯಾರಿ ಹಾಸ್ಯ ಬರಹ (ಚಿರಿಎಲ್ತ್) : ಬ್ಯಾರಿ ಭಾಷೆಯಲ್ಲಿ 100 ಶಬ್ದಗಳಿಗೆ ಮೀರದಂತೆ ಹಾಸ್ಯ ಬರಹ (ಚಿರಿಎಲ್ತ್)ಗಳನ್ನು ಕಳುಹಿಸಬೇಕು. ಹಳೆಯ ಹಾಸ್ಯ ಬರಹಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುವುದು. ಹಾಸ್ಯ ಬರಹಗಳು ಸಂಸ್ಕೃತಿಯ ಚೌಕಟ್ಟಿನೊಳಗಿರಬೇಕು.
ಎಲ್ಲ ಬರಹಗಳನ್ನು ಕನ್ನಡ ಲಿಪಿ ಬಳಸಿ ಬ್ಯಾರಿ ಭಾಷೆಯಲ್ಲಿ ಬರೆಯಬೇಕು. ಪ್ರಕಟಿತ ಬರಹಗಳಿಗೆ ಗೌರವಧನ ನೀಡಲಾಗುವುದು. ತಾವು ಬರೆದು ಕಳುಹಿಸುವ ವಿಷಯವು ಯಾವ ವಿಭಾಗಕ್ಕೆ ಸೇರಿದ್ದು ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಆಸಕ್ತರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ 2016ರ ಫೆ.10ರೊಳಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಪ್ರಿಸಿಡಿಯಮ್ ಕಮರ್ಷಿಯಲ್ ಕಾಂಪ್ಲೆಕ್ಸ್, ಅತ್ತಾವರ, ನಂದಿಗುಡ್ಡೆ ರಸ್ತೆ, ಮಂಗಳೂರು 575001 ಈ ವಿಳಾಸಕ್ಕೆ ಬರಹಗಳನ್ನು ಕಳುಹಿಸಿಕೊಡಬೇಕು. ಮಾಹಿತಿಗೆ ದೂ.ಸಂ. : 0824-2412297, 4260038, ಮೊ: 9481149135ನ್ನು ಸಂಪರ್ಕಿಸಬಹುದು ಎಂದು ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಪ್ರಕಟನೆಯಲ್ಲಿ ತಿಳಿಸಿದ್ದಾರೆ.