ಪ್ರತಿಭಟನೆಗೆ ಪ್ರತ್ಯೇಕ ಜಾಗ 4 ಸ್ಥಳಗಳ ಪರಿಶೀಲನೆ: 1 ವಾರದೊಳಗೆ ನಿರ್ಧಾರ
ಮಂಗಳೂರು: ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಸಂಘಟನೆಗಳು, ಸಾರ್ವಜನಿಕರು ಒಂದು ನಿರ್ದಿಷ್ಟ ಜಾಗದಲ್ಲಿ ಪ್ರತಿಭಟನೆ ನಡೆಸಲು ಸಹಕಾರಿಯಾಗುವಂತೆ ನಗರದ ಕೇಂದ್ರ ಸ್ಥಾನದಲ್ಲಿ ನಾಲ್ಕು ಪ್ರದೇಶಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.
ನಗರದ ಕದ್ರಿ ಉದ್ಯಾನವದಲ್ಲಿ ಫಲಪುಷ್ಪ ಪ್ರದರ್ಶನದ ಪೂರ್ವ ತಯಾರಿ ಕುರಿತಂತೆ ಆಯೋಜಿಸಲಾದ ಸುದ್ದಿಗೋಷ್ಠಿಯ ಸಂದರ್ಭ ಅವರು ಈ ವಿಷಯ ತಿಳಿಸಿದರು.
ನೆಹರೂ ಮೈದಾನದ ಕ್ರಿಕೆಟ್ ಪೆವಿಲಿಯನ್‌ನ ಬಳಿ ಸಣ್ಣದಾದ ಪ್ರದೇಶ, ನೆಹರೂ ಮೈದಾನದ ಹಿಂಬದಿಯ ಟೆಂಪೋನಿಲುಗಡೆ ಸ್ಥಳ, ಸರಕಾರಿ ನೌಕರ ಸಂಘದ ಸಭಾಭವನದ ಪಕ್ಷದ ಜಾಗ, ಜಿಲ್ಲಾಧಿಕಾರಿ ಕಚೇರಿ ಆವರಣದ ಹಳೆ ಕ್ಯಾಂಟೀನ್ ಜಾಗವನ್ನು ಇಂದು ಪೊಲೀಸ್ ಆಯುಕ್ತರು, ಡಿಸಿಪಿ ಹಾಗೂ ಮನಪಾ ಅಧಿಕಾರಿಗಳ ಜತೆಯಲ್ಲಿ ಪರಿಶೀಲಿಸಲಾಗಿದೆ. ಒಂದು ವಾರದೊಳಗೆ ಸಮರ್ಪಕ ಜಾಗವನ್ನು ಅಂತಿಮಗೊಳಿಸಿ ನಿರ್ಧಾರ ಪ್ರಕಟಿಸಲಾಗುವುದು. ಪ್ರತಿಭಟನೆಕಾರರಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ಮಾದರಿಯಲ್ಲೇ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
26ರಂದು ತಣ್ಣೀರುಬಾವಿ ಕಡಲಕಿನಾರೆ ಬಳಿ ಹಾವರ್‌ಕ್ರಾಫ್ಟ್‌ಗಳ ಪ್ರದರ್ಶನ
ಸಮುದ್ರದ ಗಡಿ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ನಿರ್ವಹಿಸುವ ಹಾವರ್‌ಕ್ರಾಫ್ಟ್‌ಗಳ ಸಾರ್ವಜನಿಕ ಪ್ರದರ್ಶನವನ್ನು ಜ. 26ರಂದು ನಗರದ ತಣ್ಣೀರುಬಾವಿ ಕಡಲ ಕಿನಾರೆ ಬಳಿ ಆಯೋಜಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಈ ಸಂದರ್ಭ ತಿಳಿಸಿದರು.
ಅಂದು ಬೆಳಗ್ಗೆ 11ರಿಂದ 11.30ರವರೆಗೆ ಪ್ರದರ್ಶನ ನಡೆಯಲಿದೆ. ನೆಲ ಹಾಗೂ ಜಲದಲ್ಲಿ ಸಂಚರಿಸಬಲ್ಲ ಹಾವರ್‌ಕ್ರಾಫ್ಟ್‌ಗಳು ಇದಾಗಿದ್ದು, ಪ್ರದರ್ಶನದ ಸಂದರ್ಭ ಈ ತಣ್ಣೀರುಬಾವಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸದಂತೆ ಮೀನುಗಾರರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.