ಫಲಪುಷ್ಪ ಪ್ರದರ್ಶನ ವಿದ್ಯುತ್ ದೀಪಾಲಂಕೃತಗೊಳ್ಳಲಿದೆ ಕದ್ರಿ ಉದ್ಯಾನವನ
ಮಂಗಳೂರು, ಜ.20: ಕರಾವಳಿ ಉತ್ಸವದ ಜತೆಯಲ್ಲೇ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಇದರಂಗವಾಗಿ ಕದ್ರಿ ಉದ್ಯಾನವನವನ್ನು ಸಂಪೂರ್ಣ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗುವುದು ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.
ಜ. 23ರಿಂದ 26ರವರೆಗೆ ನಗರದ ಕದ್ರಿ ಉದ್ಯಾನವನದಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಜತೆ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಜಿಲ್ಲೆಯ ಜನಪದ ಕಲೆ ಯಕ್ಷಗಾನವನ್ನು ಪ್ರತಿಬಿಂಬಿಸುವ ಮಾದರಿಯನ್ನು ವಿಶೇಷವಾಗಿ ಬಣ್ಣದ ಡಚ್ ಗುಲಾಬಿಗಳು, ಕಾರ್ನೇಶನ್ ಮೊದಲಾದ ಹೂವುಗಳಿಂದ ಅಲಂಕಾರಗೊಳಿಸಿ ಪ್ರದರ್ಶಿಸಲಾಗುವುದು. ಡೈರಿ ಡೇ ವತಿಯಿಂದ ವಿವಿಧ ಫಲಪುಷ್ಪಗಳಿಂದ ವಿನ್ಯಾಸಗೊಳಿಸಿದ ವಿವಿಧ ಸಂಗೀತ ವಾದ್ಯಗಳ ಮಾದರಿಗಳು, ಹಾಪ್‌ಕಾಮ್ಸ್ ವತಿಯಿಂದ ಟೊಮೇಟೋ ಬಳಕೆ ಮಾಡಿ ವಿನ್ಯಾಸಗೊಳಿಸಿದ ಆನೆ ಮಾದರಿಯ ಪ್ರದರ್ಶನ ನಡೆಯಲಿದೆ. ನಗರವಾಸಿಗಳಲ್ಲಿ ತಾರಸಿ ಹಾಗೂ ಕೈತೋಟಗಳಲ್ಲಿ ತರಕಾರಿ, ಹೂವುಗಳು ಹಾಗೂ ಆಹಾರ ಪದಾರ್ಥಗಳನ್ನು ಬೆಳೆಯುವುದನ್ನು ಜನಪ್ರಿಯಗೊಳಿಸಲು ಯೋಜನೆ ರೂಪಿಸಲಾಗಿದೆ ಈ ಬಗ್ಗೆ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ ಎಂದವರು ಹೇಳಿದರು.
ಉದ್ಯಾನವನದ ಎದುರಿನ ರಸ್ತೆ ನಾಲ್ಕು ದಿನಗಳ ವಾಹನ ಸಂಚಾರ ಮುಕ್ತ!
ಫಲಪುಷ್ಪ ಪ್ರದರ್ಶನದ ಜತೆಯಲ್ಲೇ ಕರಾವಳಿ ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡಾ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದು, ಕದ್ರಿ ಜಿಂಕೆ ಪಾರ್ಕ್‌ನಲ್ಲಿ ಆಹಾರ ಮೇಳವೂ ನಡೆಯಲಿದೆ. ಈ ಎರಡು ಸ್ಥಳಗಳ ನಡುವಿನ ರಸ್ತೆಯನ್ನು ಸುಮಾರು ನಾಲ್ಕು ದಿನಗಳ ಕಾಲ ವಾಹನಗಳ ಸಂಚಾರದಿಂದ ಮುಕ್ತಗೊಳಿಸಲಾಗುವುದು. ಈ ರಸ್ತೆ ಆರಂಭಗೊಳ್ಳುವ ಅಂದರೆ ಆಕಾಶವಾಣಿ ಕಚೇರಿ ಸಮೀಪ ಬೃಹತ್ ವೇದಿಕೆಯನ್ನು ನಿರ್ಮಿಸಲಾಗುವುದು. ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೇಶ್ ಎಚ್.ಆರ್., ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಉದ್ಯಾನವನ ಸಲಹಾ ಸಮಿತಿಯ ಲಕ್ಷ್ಮೀ ರಾವ್ ಆರೂರು, ಎನ್.ವಿ.ಕೆ. ಭಟ್ರಕೋಡಿ, ವಿಜಯಲಕ್ಷ್ಮಿ ಆರ್. ರಾವ್, ಡಾ. ಭಾರತಿ ನಿರ್ಮಲ್, ಸುಭಾಶ್ಚಂದ್ರ ರೈ, ಶಾರದಾ ಆಚಾರ್ ಉಪಸ್ಥಿತರಿದ್ದರು.