ಕಾಸರಗೋಡು: ಹೊಂಡಕ್ಕೆ ಬಿದ್ದ ಬಸ್ ; 35ಕ್ಕೂ ಅಧಿಕ ಮಂದಿಗೆ ಗಾಯ
ಕಾಸರಗೋಡು : ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಬಿದ್ದು 35 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿಯ ತೆಕ್ಕಿಲ್ ನಲ್ಲಿ ನಡೆದಿದೆ.
ಕಾನ್ಚಾನ್ಗಾಡ್ ನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್ಸು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದು ಹೊಂಡಕ್ಕೆ ಮಗುಚಿದ್ದು , ಬ್ರೇಕ್ ವೈಫಲ್ಯ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅಪಘಾತದಿಂದ ಚಾಲಕ ಕಳ್ನಾಡಿನ ಷಣ್ಮುಖ (49) , ನಿರ್ವಾಹಕ ರಾಜೀವ್ ( 30) ಕ್ಲೀನರ್ ರತೀಶ್ (28) ಪ್ರಯಾಣಿಕರಾದ ಪಾಲಕುನ್ನುವಿನ ಸುಜಿತಾ (14) ನಿಮಿತಾ (17) ದಿಲೀಪ್ (22), ಶ್ರಿತು (20) , ಅಜೀಶ್ (23), ಶ್ರೀಜಾ (25), ಸುಜಿತ್ (18), ಆಸಿಫ್ ( 17), ಅಂಬಿಕಾ (21), ರಂಜಿತ್ ( 20) ಸೇರಿದಂತೆ 35 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಇವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ .
ಬ್ರೇಕ್ ವೈಫಲ್ಯ ಕಂಡು ಬಂದ ಕೂಡಲೇ ಚಾಲಕ ಪ್ರಯಾಣಿಕರಿಗೆ ಮನವರಿಕೆ ಮಾಡಿದ್ದು , ಚಾಲಕನ ಸಮಯೋಚಿತ ಕಾರ್ಯಾಚರಣೆಯಿಂದ ಭಾರೀ ದುರಂತ ತಪ್ಪಿದೆ ಎನ್ನಬಹುದು. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು , ಅಗ್ನಿಶಾಮಕ ದಳ ಮತ್ತು ವಿದ್ಯಾನಗರ ಠಾಣೆ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರು . ಅಪಘಾತದ ಬಳಿಕ ಹಲವು ಸಮಯ ಈ ದಾರಿಯಾಗಿ ರಸ್ತೆ ಸಂಚಾರ ಅಸ್ತವ್ಯಸ್ಥ ಗೊಂಡಿತ್ತು .