ಬಿದ್ದು ಹೋಗಿರುವ ಕಿಂಡಿ ಅಣೆಕಟ್ಟುಗಳಿಗೆ ಮಣ್ಣಿನ ಒಡ್ಡು: ತೆಂಕಮಿಜಾರು ಗ್ರಾಪಂನಿಂದ ವಿನೂತನ ಕಾರ್ಯಕ್ರಮ
ಪ್ರೇಮಶ್ರ್ರೀ ಕಲ್ಲಬೆಟ್ಟು
ಮೂಡುಬಿದಿರೆ, ಜ.20: ಮಂಗಳೂರು ತಾಲೂಕಿನ ತೆಂಕಮಿಜಾರು ಗ್ರಾಪಂ ವ್ಯಾಪ್ತಿಯಲ್ಲಿ ಕೆಲವು ವರ್ಷಗಳ ಹಿಂದೆ ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ದುರಸ್ತಿಯಲ್ಲಿದ್ದು, ಕೃಷಿಕರಿಗೆ, ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಸೃಷ್ಟಿಸುತ್ತಿದ್ದ 7 ಕಿಂಡಿ ಅಣೆಕಟ್ಟುಗಳಿಗೆ ಪರ್ಯಾಯವಾಗಿ ಮಣ್ಣಿನ ಒಡ್ಡುವಿನ ಅಣೆಕಟ್ಟನ್ನು ವಿನೂತನ ಮಾದರಿಯಲ್ಲಿ ನಿರ್ಮಿಸಿ ರಾಜ್ಯದಲ್ಲಿರುವ ಇತರ ಗ್ರಾಪಂಗಳಿಗೆ ತೆಂಕಮಿಜಾರು ಗ್ರಾಪಂ ಮಾದರಿಯಾಗಿದೆ. ತೆಂಕಮಿಜಾರು ಮತ್ತು ಬಡಗ ಮಿಜಾರು ಎಂಬ 2 ಕಂದಾಯ ಗ್ರಾಮಗಳಲ್ಲಿ ಕೃಷಿ ಭೂಮಿಯು ಅಧಿಕವಾಗಿದ್ದು, ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಒಂಬತ್ತು ಸಾವಿರ ಜನಸಂಖ್ಯೆ ಇರುವ ಈ ಪಂಚಾಯತ್‌ನಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿದ್ದಾರೆ. ಸುಮಾರು 6,140.09 ಎಕರೆ ಪ್ರದೇಶದಲ್ಲಿ ಶೇ.40ರಷ್ಟು ಕೃಷಿ ಆಧಾರಿತ ಜಮೀನುಗಳಿದ್ದು, ಕೃಷಿ ಉತ್ಪನ್ನಗಳನ್ನು ಮಾಡಿ ಜೀವನ ಕ್ರಮವನ್ನು ರೈತರು ಸಾಗಿಸುತ್ತಾ ಬರುತ್ತಿದ್ದಾರೆ. ಈ ಪಂಚಾಯತ್ ವ್ಯಾಪ್ತಿಯಲ್ಲಿ ಈ ಹಿಂದೆ 14 ಕಿಂಡಿ ಅಣೆಕಟ್ಟುಗಳು ರೈತರಿಗೆ ನೀರುಣಿಸುವ ಕಾರ್ಯವನ್ನು ಮಾಡುತ್ತಿತ್ತು. ಆದರೆ ಕಾಲಾ ನಂತರ ಕೂಲಿಯಾಳುಗಳ ಸಮಸ್ಯೆ, ಕುಟುಂಬಗಳು ಒಡೆದು ಪಾಲು ಹಂಚಿಕೆಯಲ್ಲಿ ಸಿಕ್ಕಿದ ಜಾಗದಲ್ಲಿ ಕೃಷಿ ಯನ್ನು ಮಾಡದೆ, ಉತ್ತಮ ಉದ್ಯೋಗವನ್ನರಸಿ ಪೇಟೆ ಯನ್ನು ಆಶ್ರಯಿಸಿದ ಪರಿಣಾಮ ಹಾಗೂ ಸಣ್ಣ ಗಾತ್ರದ ಕೃಷಿಯಲ್ಲಿ ಉತ್ಪಾದನೆ ಕಡಿಮೆಯಾಗಿ ಶ್ರಮ ಜಾಸ್ತಿಯಾ ದಾಗ ಜನರು ಅಣೆಕಟ್ಟನ್ನು ನಿರ್ಮಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾದುವು. ನಂತರ ಸರಕಾರದಿಂದ ಈ ಬಗ್ಗೆ ಕನಿಷ್ಠ ಸ್ಪಂದನೆ ದೊರೆತಾಗ ಪಂಚಾಯತ್ ಮುತುವರ್ಜಿ ವಹಿಸಿ ಕೃಷಿಯನ್ನು ಪುನಶ್ಚೇತನಗೊಳಿಸುವ ಜೊತೆಯಲ್ಲಿ ಭೂಮಿಗೆ ನೀರನ್ನು ಇಂಗಿಸುವುದರೊಂದಿಗೆ ಕುಡಿಯುವ ನೀರಿನ ಪ್ರಾಮುಖ್ಯತೆಯನ್ನು ಅರಿತು 2015-16ನೆ ಸಾಲಿನ ಕ್ರಿಯಾ ಯೋಜನೆಯಡಿ ಪಂಚಾಯತ್ ವ್ಯಾಪ್ತಿಯ ಕಿಂಡಿ ಅಣೆಕಟ್ಟನ್ನು ನಿರ್ಮಿಸಲು ಪಣತೊಟ್ಟಿತ್ತು.
ಕಿಂಡಿ ಅಣೆಕಟ್ಟುಗಳ ಸಮಸ್ಯೆಯ ಬಗ್ಗೆ ಪ್ರತೀ ಗ್ರಾಮ ಸಭೆಯಲ್ಲೂ ಜನರು ಸಭೆಯ ಮುಂದಿಡುತ್ತಿದ್ದುದರಿಂದ ಅನುದಾನಕ್ಕಾಗಿ ಗ್ರಾಪಂ ಆಡಳಿತವು ವಿವಿಧ ಇಲಾ ಖೆಗಳಿಗೆ ಮನವಿಯನ್ನು ಸಲ್ಲಿಸಿತ್ತು. ಆದರೆ ಯಾವುದೇ ಅನು ದಾನ ಇಲ್ಲದಿರುವುದರಿಂದ ಕಿಂಡಿ ಅಣೆಕಟ್ಟಿನ ಬದಲಾಗಿ ತಾತ್ಕಾಲಿಕವಾಗಿ ಮಣ್ಣು ರಾಶಿ ಹಾಕಿ ನೀರನ್ನು ತಡೆಯುವ ಕಾರ್ಯಕ್ರಮವನ್ನು ಜನರ ಸಹಕಾರ ದೊಂದಿಗೆ ಹಮ್ಮಿಕೊಳ್ಳುವ ಹೊಸ ಹೆಜ್ಜೆ ಮುಂದಿಟ್ಟಿತ್ತು.
ಅದರಂತೆ ಪಂಚಾಯತ್‌ನ ಅತೀ ದೊಡ್ಡ ಅಣೆಕಟ್ಟು ಗಳಾದ ವಂಟಿಮಾರು, ಮಂಗೆಬೆಟ್ಟು, ಕಿಜನಬೆಟ್ಟುವಿನಲ್ಲಿ ಹಲಗೆ ಮತ್ತು ಮಣ್ಣು ಹಾಕಿದ ಅಣೆಕಟ್ಟನ್ನು ಗ್ರಾಮಸ್ಥರೇ ಸೇರಿ ಕಟ್ಟುತ್ತಿದ್ದಾರೆ. ಮಧ್ಯಮ ಗಾತ್ರದ ಅಣೆಕಟ್ಟಿನಿಂದ ಹಲೇರಿ ಕಿಂಡಿ ಅಣೆಕಟ್ಟನ್ನು ಪಂಚಾಯತ್ ಗ್ರಾಮಸ್ಥರ ಸಹಕಾರದೊಂದಿಗೆ ಉಳಿದಂತೆ ಅಮ್ಮಾಟ್ಟು, ಅಂಗಡಿಗುತ್ತು, ಕೊಪ್ಪಳಪಾದೆ, ಅಂತರಗುತ್ತು, ಕೊಂದನಮುಗೇರು ಅಣೆಕಟ್ಟನ್ನು ಪಂಚಾಯತ್ ವತಿಯಿಂದಲೇ ಮಣ್ಣಿನ ಒಡ್ಡುಗಳನ್ನು ಹಾಕಿ ನಿರ್ಮಿಸಿದೆ. ಉಳಿದಂತೆ ಗರೋಡಿ ಅಣೆಕಟ್ಟು,ಮಿಜಾರುಗುತ್ತು ಅಣೆಕಟ್ಟು ಮತ್ತು ಹಾಗೂ ಪುಂಚಿತ್‌ಮಾರು ಮಣ್ಣಿನ ಅಣೆಕಟ್ಟನ್ನು ಕಟ್ಟಲಾಗಿದ್ದು, ಇದಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ಸಹಕಾರವೂ ಇದೆ ಎನ್ನಲಾಗಿದೆ. ಇದೀಗ ಮಣ್ಣಿನ ಒಡ್ಡುಗಳಿಂದ ನಿರ್ಮಿಸಿರುವ ಅಣೆಕಟ್ಟುಗಳಿಂದಾಗಿ ನೀರು ತುಂಬಿಕೊಂಡಿದ್ದು, ತೆಂಕಮಿಜಾರು ಗ್ರಾಪಂ ವ್ಯಾಪ್ತಿಯ ಕೃಷಿಕರಿಗೆ ಮಾತ್ರವಲ್ಲದೆ, ಸಮೀಪದ ಇತರ ಗ್ರಾಪಂ ವ್ಯಾಪ್ತಿಯ ಕೃಷಿಕರಿಗೂ ನೀರಿನ ಸಮಸ್ಯೆ ದೂರವಾಗಲಿದೆ. ಅಲ್ಲದೆ, ಮಳೆಗಾಲದಲ್ಲಿ ಜನರು ಹಾಲಿನ ಡೈರಿಗೆ, ಶಾಲೆಗೆ ಹೋಗಬೇಕಾದರೆ 4-6 ಕಿ.ಮಿ.ವರೆಗೆ ಒಂದು ಸುತ್ತಾಗಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ದೂರವಾಗಲಿದೆ. ಗ್ರಾಪಂ ವ್ಯಾಪ್ತಿಯ 750ಕ್ಕೂ ಅಧಿಕ ಕುಟುಂಬ ಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ನೀಡಿ ಎಲ್ಲ ಸಂಪರ್ಕಗಳಿಗೂ ಮೀಟರ್ ಅಳವಡಿಸಿ ನೀರು ಪೋಲಾಗುವಿಕೆಯನ್ನು ತಡೆಗಟ್ಟುವ ಮೂಲಕ ದಿಟ್ಟ ಹೆಜ್ಜೆಯನ್ನು ಇಟ್ಟಿದೆ.
20-25 ವರ್ಷಗಳಿಂದ ಕಟ್ಟಲಾಗದಂತಹ ಅಣೆಕಟ್ಟುಗಳನ್ನು ಇದೀಗ ಮಣ್ಣಿನ ಒಡ್ಡಿನ ಮೂಲಕ ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಸರಕಾರ ಕಿಂಡಿ ಅಣೆಕಟ್ಟುಗಳಿಗೆ ಅನುದಾನ ನೀಡಬೇಕು.
ಸಣ್ಣ ನೀರಾವರಿ ಇಲಾಖೆ ಕೂಡಾ ಈ ಬಗ್ಗೆ ಗಮನಹರಿಸಬೇಕಾಗಿದೆ.
ಬಾಲಕೃಷ್ಣ ದೇವಾಡಿಗ, ತೆಂಕಮಿಜಾರು ಗ್ರಾಪಂ ಅಧ್ಯಕ್ಷ