ರೋಹಿತ್ ಸಾವಿನ ಪ್ರಕರಣ : ಸಮಗ್ರ ತನಿಖೆಗೆ ಆಗ್ರಹಿಸಿ ಧರಣಿ
ಪುತ್ತೂರು, ಜ.20: ಹೈದರಾಬಾದ್ ಕೇಂದ್ರೀಯ ವಿವಿ ಹಾಸ್ಟೆಲ್‌ನಲ್ಲಿ ನಡೆದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನ ಸಾವಿನ ಕುರಿತು ಸಮಗ್ರ ತನಿಖೆಗೆ ಮತ್ತು ಸಾವಿಗೆ ಕಾರಣವಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಸಂಜೆ ಪುತ್ತೂರಿನ ಬಸ್ ನಿಲ್ದಾಣದ ಬಳಿ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಪುತ್ತೂರು ತಾಲೂಕು ಸಮಿತಿಯ ನೇತೃತ್ವದಲ್ಲಿ ಧರಣಿ ನಡೆಯಿತು. ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ಇರ್ಶಾದ್ ಕಾವು, ರೋಹಿತ್ ವೇಮುಲಾ ಸಾವು ಆತ್ಮಹತ್ಯೆಯಲ್ಲ, ಅದು ವ್ಯವಸ್ಥಿತವಾಗಿ ನಡೆದ ಕೊಲೆಯಾಗಿದ್ದು, ಈ ಜಾತಿಯಾಧಾರಿತ ದೌರ್ಜನ್ಯದಲ್ಲಿ ಬಿಜೆಪಿ ಹಾಗೂ ಎಬಿವಿಪಿ ಸಂಘಟನೆ ನೇರವಾಗಿ ಶಾಮೀಲಾಗಿವೆ. ರೋಹಿತ್ ಕುಟುಂಬಕ್ಕೆ ಪರಿಹಾರ ನೀಡಬೇಕು, ಅಮಾನತುಗೊಂಡ ವಿದ್ಯಾರ್ಥಿಗಳನ್ನು ವಾಪಾಸು ವಿವಿಗೆ ಸೇರಿಸಬೇಕು ಹಾಗೂ ಪ್ರಕರಣದ ಕುರಿತು ನ್ಯಾಯೋಚಿತ ಸಮಗ್ರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು. ಸಿಎಫ್‌ಐ ಸಂಟನೆಯ ಮುಖಂಡರಾದ ಸಾದಿಕ್ ಕುಂಬ್ರ, ಅನೀಶ್, ಶಿಹಾಬ್, ಇರ್ಶಾದ್ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು.