×
Ad

ಹಮ್ಮರ್ ಕೊಲೆ ಪ್ರಕರಣ ಕೇರಳದ ಬೀಡಿ ಉದ್ಯಮಿ ತಪ್ಪಿತಸ್ಥ ಇಂದು ಶಿಕ್ಷೆಯ ಪ್ರಮಾಣ ಪ್ರಕಟ

Update: 2016-01-20 23:53 IST

 ತಿರುವನಂತಪುರ,ಜ.20: ತನ್ನ ಸ್ಪೋರ್ಟ್ಸ್ ಯುಟಿಲಿಟಿ ವಾಹನ(ಎಸ್‌ಯುವಿ)ವನ್ನು ನುಗ್ಗಿಸಿ ತನ್ನ ವಸತಿ ಸಮುಚ್ಚಯದ ಕಾವಲುಗಾರನ ಹತ್ಯೆಗೈದಿದ್ದ ಉದ್ಯಮಿ ಮುಹಮ್ಮದ್ ನಿಷಾಮ್‌ನನ್ನು ತಪ್ಪಿತಸ್ಥನೆಂದು ತೃಶ್ಶೂರಿನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು ಬುಧವಾರ ಘೋಷಿಸಿದೆ. ಅದು ಶಿಕ್ಷೆಯ ಪ್ರಮಾಣವನ್ನು ಗುರುವಾರ ಪ್ರಕಟಿಸಲಿದೆ.
ಪ್ರಮುಖ ಬೀಡಿ ಉದ್ಯಮಿಯಾಗಿರುವ ನಿಷಾಮ್ 2015,ಜ.28ರಂದು ಬೆಳಿಗ್ಗೆ ಅಪಾರ್ಟ್‌ಮೆಂಟ್‌ನ ಪ್ರವೇಶದ್ವಾರವನ್ನು ತೆರೆಯಲು ವಿಳಂಬಿಸಿದ್ದಕ್ಕಾಗಿ ಕ್ರುದ್ಧಗೊಂಡು ಸೆಕ್ಯೂರಿಟಿ ಗಾರ್ಡ್ ಚಂದ್ರ ಬೋಸ್ ಮೇಲೆ ಹಲ್ಲೆ ನಡೆಸಿದ್ದ. ಆತ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ ನಿಷಾಮ್ ಆತನನ್ನು ತನ್ನ ಹಮ್ಮರ್ ವಾಹನದಲ್ಲಿ ಬೆನ್ನಟ್ಟಿ ಡಿಕ್ಕಿ ಹೊಡೆಸಿದ್ದ. ವಾಹನ ಮತ್ತು ಗೋಡೆಯ ನಡುವೆ ಸಿಲುಕಿದ್ದ ಬೋಸ್ ತೀವ್ರವಾಗಿ ಗಾಯಗೊಂಡು ಒಂದು ತಿಂಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.
 ಈ ಪ್ರಕರಣ ಇಡೀ ರಾಷ್ಟ್ರದ ಗಮನವನ್ನು ಸೆಳೆದಿತ್ತು. ಸಂಬಂಧಿತ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯವು ಈ ವರ್ಷದ ಜನವರಿ 31ರೊಳಗೆ ತೀರ್ಪನ್ನು ಪ್ರಕಟಿಸುವಂತೆ ವಿಚಾರಣಾ ನ್ಯಾಯಾಲಯವನ್ನು ಆದೇಶಿಸಿತ್ತು.
ತಮಿಳುನಾಡು ಮೂಲದ ಕಿಂಗ್ ಬೀಡಿ ಕಂಪೆನಿಯ ನಿರ್ದೇಶಕನಾಗಿರುವ ನಿಷಾಮ್ ತಂಬಾಕು ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಸರಣಿ ಉದ್ಯಮಗಳನ್ನು ನಡೆಸುತ್ತಿದ್ದಾನೆ. ಭಾರತದಲ್ಲಿ ಮತ್ತು ವಿದೇಶಗಳಲ್ಲಿ 5,000 ಕೋ.ರೂ.ವೌಲ್ಯದ ಆಸ್ತಿಯನ್ನು ಆತ ಹೊಂದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News