ಲಯನ್ಸ್ ಪ್ರಾಂತ್ಯ 5 ಸಮ್ಮೇಳನದ ಪ್ರಯುಕ್ತ ನಿರ್ಮಿತ ಹಳೆಯಂಗಡಿ ಬಸ್ ತಂಗುದಾಣ ನಾಳೆ ಲೋಕಾರ್ಪಣೆ
ಹಳೆಯಂಗಡಿ, ಜ.21: ಹಳೆಯಂಗಡಿಯ ಲಯನ್ಸ್ ಕ್ಲಬ್‌ನ ವತಿಯಿಂದ ಜನವರಿ 23ರಂದು ಜರಗಲಿರುವ ಲಯನ್ಸ್ ಜಿಲ್ಲೆಯ ಪ್ರಾಂತ್ಯ 5 ಸಮ್ಮೇಳನದ ಸವಿ ನೆನಪಿಗಾಗಿ ಹಳೆಯಂಗಡಿ ಜಂಕ್ಷನ್‌ನಲ್ಲಿ ನೂತನವಾಗಿ ನಿರ್ಮಿಸಲಾದ ಸೌರ ದೀಪದ ವ್ಯವಸ್ಥೆ ಹೊಂದಿರುವ ಸುಸಜ್ಜಿತ ಆಧುನಿಕ ಬಸ್ ತಂಗುದಾಣ ಜ.22ರ ಸಂಜೆ ಉದ್ಘಾಟನೆಗೊಳ್ಳಲಿದೆ.
ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಮತ್ತು ಲಯನ್ಸ್ ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರಿ ಇದನ್ನು ಉದ್ಘಾಟಿಸಲಿದ್ದಾರೆ ಎಂದು ಲಯನ್ಸ್ ಕ್ಲಬ್ ಹಳೆಯಂಗಡಿಯ ಪ್ರಾಂತ್ಯಾಧ್ಯಕ್ಷ ಯಾದವ ದೇವಾಡಿಗ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಇಲಾಖೆಗೆ 12 ಬ್ಯಾರಿಕೇಡ್, ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಸೌಲಭ್ಯ, ಹಳೆಯಂಗಡಿಗೆ ಸ್ಮಶಾನದಲ್ಲಿ ಮೃತದೇಹವನ್ನು ತಂದಿಡಲು ನಿರ್ಮಿಸಿದ ಪ್ಲಾಟ್ ಫಾರ್ಮ್ ಉದ್ಘಾಟನೆ ಹಾಗೂ ವೈದ್ಯಕೀಯ ನೆರವನ್ನು ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಾಂತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ನಾನಿಲ್ ವಿವರಿಸಿದರು.