ಸುಳ್ಯ : ಜಿಲ್ಲಾಧಿಕಾರಿಯಿಂದ ಸುಳ್ಯದಲ್ಲಿ ಜನತಾದರ್ಶನ
110 ಕೆವಿ ವಿದ್ಯುತ್ ಮಾರ್ಗ - ವಾರದಲ್ಲಿ ಕ್ರಮದ ಭರವಸೆ
ಸುಳ್ಯ: ಸುಳ್ಯದ 110 ಕವಿ ವಿದ್ಯುತ್ ಮಾರ್ಗದ ಕುರಿತು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸುವುದನ್ನು ರದ್ದು ಮಾಡಲಾಗಿದ್ದು, ವಾರದಲ್ಲೇ ಮಾರ್ಗದ ಅಡಚಣೆ ನಿವಾರಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.
ಸುಳ್ಯದಲ್ಲಿ ಗುರುವಾರ ನಡೆದ ಜನತಾದರ್ಶನದಲ್ಲಿ ಸಾರ್ವಜನಿಕರ ಅಹವಾಳು ಸ್ವೀಕರಿಸಿ ಅವರು ಮಾತನಾಡಿದರು. ಕೊಳ್ತಿಗೆ ಹಾಗೂ ಸುಳ್ಯದ ಸಬ್‌ಸ್ಟೇಶನ್ ಮತ್ತು ಮಾರ್ಗದ ಸಮಸ್ಯೆ ಪರಿಹಾರಕ್ಕೆ ಸಭೆ ನಡೆಸಿ ಚರ್ಚಿಸುವ ಬದಲು ನೇರವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಮತ್ತು ಮಾರ್ಗದ ಸಥಾಪನೆ ಕೂಡಾ ಶೀಘ್ರ ನಡೆಯಲಿದೆ ಎಂದವರು ಭರವಸೆ ನೀಡಿದರು. ಜಯನಗರದಲ್ಲಿ 38 ಎಕರೆ ಪ್ರದೇಶವನ್ನು ಮಿಲಿಟ್ರಿ ಗ್ರೌಂಡ್ ಹೆಸರಿನಲ್ಲಿ ಕಾಯ್ದಿರಿಸಿದ್ದು, ಅದನ್ನು ಸ್ಥಳಿಯರು ಅತಿಕ್ರಮಿಸಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಮಿಲಿಟ್ರಗ್ರೌಂಡ್‌ನ್ನು ರದ್ದು ಮಾಡಿ ಅತಿಕರಿಸಿದವರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ಅಂಗಾರ ಹಾಗೂ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಮನವಿ ಮಾಡಿದರು. ಮಿಲಿಟ್ರಿ ಗ್ರೌಂಡ್‌ನ್ನು ರದ್ದು ಮಾಡುವುದು ಅಷ್ಟು ಸುಲಭವಲ್ಲ. ಈ ಕುರಿತು ಹಂತ ಹಂತಗಳಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಜಿಲ್ಲಾಧಿಕಾರಿ ಉತ್ತರಿಸಿದರು. ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಜನನ-ಮರಣ ನೋಂದಣೆ ಆಗುತ್ತಿಲ್ಲ. ರಾಜ್ಯಕ್ಕೆ ಒಂದೇ ಸರ್ವರ್ ಇದ್ದು, ಡಾಟಾ ಎಂಟ್ರಿ ಕೂಡಾ ಇಲ್ಲದೆ ಇರುವುದರಿಂದ ಸಮಸ್ಯೆ ಆಗಿದೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು. ಜಟ್ಟಿಪಳ್ಳ-ಕೊಡಿಯಾಲ್‌ಬೈಲ್ ರಸ್ತೆಯನ್ನು ಅಭಿವೃದ್ಧಿ ಪಡಿಸಿ ನಗರೋತ್ಥಾನದಲ್ಲಿ ಡಾಮರೀಕರಣ ಮಾಡಲು ಅನುಮತಿ ನೀಡುವಂತೆ ಪ್ರಕಾಶ್ ಹೆಗ್ಡೆ ಆಗ್ರಹಿಸಿದರು.