×
Ad

ಸುಳ್ಯ : ಮಾಂಗಲ್ಯ ಭಾಗ್ಯಕ್ಕೆ ಉಡುಗೊರೆಯಾಗಿ ಪುಸ್ತಕಭಾಗ್ಯ !

Update: 2016-01-21 17:33 IST

- ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಗಾಯಕ ಕೃಷ್ಣರಾಜ್ ಮದುವೆ

- ಬಡ ಮಕ್ಕಳಿಗೆ ಪುಸ್ತಕಗಳನ್ನು ಹಂಚುವ ವಾಗ್ದಾನ

ಸುಳ್ಯ: ನೋಟ್ ಪುಸ್ತಕಗಳನ್ನು ಮದುವೆಯಲ್ಲಿ ಉಡುಗೊರೆ ಪಡೆಯುವ ಮೂಲಕ ಸುಳ್ಯದ ಗಾಯಕ ಕೃಷ್ಣರಾಜ್ ಕೇರ್ಪಳ ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ನವ ವಧೂವರರಿಗೆ ಬರಿಕೈಯಲ್ಲಿ ಆಶೀರ್ವಾದ ಮಾಡಬಾರದು, ಸಣ್ಣ ಕಾಣಿಕೆಯೊಂದಿಗೆ ಆಶೀರ್ವದಿಸಬೇಕು ಎಂಬುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಆದರೆ ಕಾಲ ಬದಲಾದಂತೆ ಕಾಣಿಕೆಯೊಂದಿಗೆ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆ ನೀಡುವ ಸಂಪ್ರದಾಯ ಆರಂಭವಾಯಿತು. ಹಲವು ಸಂದರ್ಭಗಳಲ್ಲಿ ನೀಡಿದ ಉಡುಗೊರೆ ಅಟ್ಟ ಸೇರಿ ಯಾರಿಗೂ ಉಪಯೋಗವಿಲ್ಲದೇ ಹೋದದ್ದೂ ಇದೆ. ಕೆಲವು ಸಮುದಾಯದಲ್ಲಿ ದೊಡ್ಡ ಮೊತ್ತದ ಉಡುಗೊರೆ ನೀಡುವುದು, ಅಥವ ದೊಡ್ಡ ಮೊತ್ತವನ್ನು ಕವರ್‌ನಲ್ಲಿ ಹಾಕಿ ನೀಡುವುದು ಪ್ರತಿಷ್ಠೆ ಎಂದೂ ಗುರುತಿಸಿಕೊಂಡಿತ್ತು. ಆಧುನಿಕತೆ ಬೆಳೆದಂತೆ ಹಲವು ಸಮುದಾಯಗಳಲ್ಲಿ ಆಶೀರ್ವಾದವೇ ಉಡುಗೊರೆ ಎಂಬ ಹೊಸ ಸಂಪ್ರದಾಯವೂ ಆರಂಭವಾಯಿತು. ಸುಳ್ಯ ನ್ಯಾಯಾಲಯದ ಉದ್ಯೊಗಿ ವಾಮನ ನಾಯ್ಕೊ ಅವರ ಪುತ್ರ, ಗಾಯಕ ಕೃಷ್ಣರಾಜ್ ಕೇರ್ಪಳ ಮತ್ತು ಪೂರ್ಣಿಮ ಅವರ ಮದುವೆಯ ಇದಲ್ಲೆಕ್ಕಿಂತ ಭಿನ್ನವಾಗಿ ನಡೆಯಿತು. ಮದುವೆಗೆ ಆಗಮನವೇ ಉಡುಗೊರೆ ಎಂದು ಆಮಂತ್ರಣ ಪತ್ರದಲ್ಲಿ ಅಚ್ಚು ಹಾಕಿದ್ದು, ಅದರೊಂದಿಗೆ ಉಡುಗೊರೆ ನೀಡಬೇಕೆಂದಿದ್ದರೆ ಬರೆಯುವ ಪುಸ್ತಕಗಳನ್ನು ನೀಡಿ. ಅದನ್ನು ಅಗತ್ಯವಿರುವ ಬಡ ವಿದ್ಯಾರ್ಥಿಗಳಿಗೆ ಹಂಚುವುದಾಗಿಯೂ ಪ್ರಕಟಿಸಿದ್ದರು. ಪ್ರತಿಕ್ರಿಯೆ ಅದ್ಭುತವಾಗಿತ್ತು.

ಸುಳ್ಯದ ಶ್ರೀದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಗುರುವಾರ ನಡೆದ ವಿವಾಹ ಸಮಾರಂಭಕ್ಕೆ ಪುಸ್ತಗಳ ಉಡುಗೊರೆಯೇ ಹರಿದು ಬಂದಿತ್ತು. ಹಾಲ್‌ನ ಹೊರಗೆ ಪುಸ್ತಕಗಳ ಗಿಫ್ಟ್ ಪ್ಯಾಕ್‌ಗಳನ್ನು ಮಾರಾಟ ಮಾಡುವ ಅಂಗಡಿಯೂ ಇತ್ತು. ಅನ್ನ ನೀಡಿದರೆ ಒಂದು ದಿನದ ಸಹಾಯ ಮಾಡಿದಂತೆ, ಹಣ ನೀಡಿದರೆ ಹಲವು ದಿನಗಳ ಸಹಾಯ ಮಾಡಿದಂತೆ, ಅಕ್ಷರ ಕಲಿಸಿ ಅರಿವು ಮೂಡಿಸಿದರೆ ಶಾಶ್ವತ ಸಹಾಯ ಮಾಡಿದಂತೆ ಎಂಬ ಸ್ವಾಮಿ ವಿವೇಕಾನಂದರ ಮಾತು ಇಲ್ಲಿ ಅಕ್ಷರಶಃ ಕಾರ್ಯರೂಪಕ್ಕೆ ಬಂದಿದೆ. ಇತರರಿಗೂ ಇದು ಮಾದರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News