×
Ad

ಜ.23 : ಮೂಡುಬಿದಿರೆಯಲ್ಲಿ "ಕೋಟಿ-ಚೆನ್ನಯ" ಜೋಡುಕರೆ ಕಂಬಳೋತ್ಸವ

Update: 2016-01-21 18:27 IST

ಮೂಡುಬಿದಿರೆ : "ಕೋಟಿ-ಚೆನ್ನಯ" ಜೋಡುಕರೆ ಕಂಬಳ ಸಮಿತಿ ವತಿಯಿಂದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ " ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ"ದ ವಿಸ್ತಾರವಾದ ಪ್ರದೇಶದಲ್ಲಿ ಕಳೆದ ಹದಿಮೂರು ವರ್ಷಗಳಿಂದ ಅಹಿಂಸಾತ್ಮಕವಾಗಿ ನಡೆಯುತ್ತಾ ಬಂದಿರುವ " ಕೋಟಿ-ಚೆನ್ನಯ" ಜೋಡುಕರೆ ಕಂಬಳವು ಈ ಬಾರಿ ಜ.23ರಂದು ಹೊನಲು ಬೆಳಕಿನಲ್ಲಿ ಹದಿನಾಲ್ಕನೆ ವರ್ಷದ ಕಂಬಳೋತ್ಸವವನ್ನು ನಡೆಸಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ, ರಾಜ್ಯ ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.

ಅವರು ಗುರುವಾರದಂದು ಮೂಡುಬಿದಿರೆಯ ಖಾಸಗಿ ಹೊಟೇಲೊಂದರಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು. ಜಿಲ್ಲೆಯಲ್ಲೇ ಶಿಸ್ತುಬದ್ಧ ಮತ್ತು ಪ್ರತಿಷ್ಠಿತ ಕಂಬಳವೆಂದು ಗುರುತಿಸಿಕೊಂಡಿರುವ ಮೂಡುಬಿದಿರೆಯ ಕಂಬಳದಲ್ಲಿ ಈ ಬಾರಿ 190 ಜೋಡಿ ಓಟದ ಕೋಣಗಳು ಭಾಗವಹಿಸಲಿವೆ. ಪ್ರಾಣಿ ಹಿಂಸೆ ಆಗದಂತೆ ಗರಿಷ್ಠ ಎಚ್ಚರಿಕೆಯನನ್ನು ವಹಿಸಲಾಗುವುದು ಅಲ್ಲದೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಆಗದಂತೆ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದೇವೆ ಎಂದು ತಿಳಿಸಿದರು. ಈ ಬಾರಿಯ ಕಂಬಳದಲ್ಲಿ ರೈತರಿಗೆ ಗಂಜಿಯೂಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಮತ್ತು ಕೋಣಗಳ ಮೈ ತಂಪಾಗಿಸಲು ಪಕ್ಕದಲ್ಲಿಯೇ ನೀರಿನ ಹೊಂಡಗಳನ್ನು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

  ಸ್ಟೇಜಿನಲ್ಲಿ ಕುಳಿತುಕೊಂಡಿರುವ ವೀಕ್ಷಕರು ಮತ್ತು ಜನರಿಗೆ ಕಂಬಳದ ಕೋಣವನ್ನು ಬಿಡುವಲ್ಲಿ ಮತ್ತು ತಲುಪುವಲ್ಲಿ ಸರಿಯಾಗಿ ನೋಡಲು ಎಲ್‌ಸಿಡಿ ಪರದೆಗಳನ್ನು ಹಾಕಲಾಗುವುದು ಮತ್ತು ನಿಖರತೆಯನ್ನು ಕಾಯ್ದುಕೊಳ್ಳಲು ಟೈಮರನ್ನು ಅಳವಡಿಸುವ ಮೂಲಕ ಕಂಬಳವನ್ನು ಪಾರದರ್ಶಕವಾಗಿ ಮಾಡಲಾಗುವುದು ಎಂದು ಕಂಬಳ ಸಮಿತಿಯ ಪ್ರ.ಕಾರ್ಯದರ್ಶಿ ಕೆ.ಗುಣಪಾಲ ಕಡಂಬ ತಿಳಿಸಿದರು. ಕಂಬಳವನ್ನು ಆಲಂಗಾರು ಚರ್ಚಿನ ಧರ್ಮಗುರು ರೆ/ಫಾ/ಬೇಸಿಲ್ ವಾಸ್, ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ/ಮೂ/ ಈಶ್ವರ ಭಟ್ ಮತ್ತು ಪುತ್ತಿಗೆಯ ಇ.ಎಂ.ಶಾಫಿ ಸಾಬ್ ಜತೆಯಾಗಿ ಕಂಬಳವನ್ನು ಶನಿವಾರ ಬೆಳಿಗ್ಗೆ ಉದ್ಘಾಟಿಸಲಿದ್ದು, ಚೌಟರ ಅರಮನೆಯ ಕುಲದೀಪ್ ಎಂ. ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಸಂಜೆ ದಿ.ಫ್ಯಾಬಿಯನ್ ಬಿ.ಎಲ್.ಕುಲಾಸೊ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ, ವೈಟ್‌ಲಿಫ್ಟಿಂಗ್ ರಾಷ್ಟ್ರೀಯ ತರಬೇತುದಾರ ಪುಷ್ಪರಾಜ ಹೆಗ್ಡೆ ಹಾಗೂ ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಪ್ರತಿಭೆ ಪಂಚಮಿ ಮಾರೂರನ್ನು ಸನ್ಮಾನಿಸಲಾಗುವುದು. ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸಮಿತಿಯ ಉಪಾಧ್ಯಕ್ಷರುಗಳಾದ ಉದ್ಯಮಿ ಪ್ರೇಮನಾಥ ಮಾರ್ಲ ಕಾರ್ಯದರ್ಶಿಗಳಾದ ಸುರೇಶ್ ಪ್ರಭು, ಚಂದ್ರಹಾಸ ಸನಿಲ್, ಪುರಸಭಾ ಸದಸ್ಯ ಅಬ್ದುಲ್ ಬಶೀರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News