ಮಂಗಳೂರು; ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವಕ್ಕೆ ಇಂದು ತೆರೆ,
ಮಂಗಳೂರು ವಿವಿಯಲ್ಲಿ ನಡೆದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ ಸ್ಪರ್ಧೆಯ ಒಂದು ನೋಟ.
ಮಂಗಳೂರು ವಿಶ್ವವಿದ್ಯಾನಿಲಯ,
ಕೊಣಾಜೆ: ನವದೆಹಲಿಯ ಅಸೋಸಿಯೇಟ್ ಆಫ್ ಇಂಡಿಯನ್ ಯುನಿವರ್ಸಿಟಿ (ಎಐಯು) ಹಾಗೂ ಕೇಂದ್ರ ಯುವಜನಸೇವೆ ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಕೊಣಾಜೆಯ ಮಂಗಳೂರು ವಿವಿಯ ಆತಿಥ್ಯದಲ್ಲಿ ಮಂಗಳಗಂಗೋತ್ರಿಯ ಕ್ಯಾಂಪಸ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ಮಂಗಳೂರು ವಿವಿಯಲ್ಲಿ ನಡೆಯುತ್ತಿರುವ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವವು ಶುಕ್ರವಾರ ತೆರೆ ಕಾಣಲಿದೆ. ಕಳೆದ ನಾಲ್ಕು ದಿನಗಳಿಂದ ಮಂಗಳೂರು ವಿವಿಯ ಕ್ಯಾಂಪಸ್‌ನಲ್ಲಿ ಆವರಣದಲ್ಲಿ ನಿರ್ಮಿಸಲಾಗಿರುವ ಐದು ವೇದಿಕೆಗಳಲ್ಲಿ ವಿವಿಧ ಐದು ರಾಜ್ಯಗಳ ಯುವ ಪ್ರತಿಭೆಗಳಿಂದ ಸ್ಪರ್ಧಾ ಕಾರ್ಯಕ್ರಮಗಳು ನಡೆದು ಯುವ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಮಂಗಳಾ ಸಭಾಂಗಣದ ಡಾ.ಶಿವರಾಮ ಕಾರಂತ ವೇದಿಕೆಯಲ್ಲಿ ಗುರುವಾರ ಏಕಪಾತ್ರಾಭಿನಯ ಹಾಗೂ ನಾಟಕ ಸ್ಪರ್ಧೆಗಳು ಬಹಳಷ್ಟು ಪೈಪೋಟಿಯಿಂದ ನಡೆದವು. ಮಂಗಳಾ ಸಭಾಂಗಣದ ಬಳಿ ನಿರ್ಮಿಸಲಾಗಿದ್ದ ಕಯ್ಯಾರ ಕಿಞಣ್ಣ ರೈ ವೇದಿಕೆಯಲ್ಲಿ ಶಾಸ್ತ್ರೀಯ ನೃತ್ಯ ಮತ್ತು ಜಾನಪದ ಸಂಗೀತ ಸ್ಪರ್ಧೆಗಳು ನಡೆಯಿತು. ವಿಜ್ಞಾನ ಸಂಕೀರ್ಣ ಕಟ್ಟಡದಲ್ಲಿ ವಿವಿಧ ಸಂಗೀತ ಸ್ಪರ್ಧೆಗಳು ನಡೆದರೆ ಹಳೆಸೆನೆಟ್ ಸಭಾಂಗಣದ ಪಂಜೆ ಮಂಗೇಶರಾವ್ ವೇದಿಕೆಯಲ್ಲಿ ಡಿಬೆಟ್ ಸ್ಪರ್ಧೆಯು ನಡೆಯಿತು. ಮಾನವಿಕ ವಿಭಾಗದಲ್ಲಿರುವ ಇದಿನಬ್ಬ ವೇದಿಕೆಯಲ್ಲಿ ಪೋಸ್ಟರ್ ಮೇಕಿಂಗ್ ಹಾಗೂ ವ್ಯಂಗ್ಯ ಚಿತ್ರ ರಚನೆ ಸ್ಪರ್ಧೆ ಮತ್ತು ರಂಗೋಲಿ ಬಿಡಿಸುವ ಸ್ಪರ್ಧೆಯು ನಡೆಯಿತು. ಸುಮಾರು 25 ಕ್ಕೂ ಹೆಚ್ಚು ವಿಭಾಗದಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ಗುರುವಾರ ಸಂಜೆಯ ವೇಳೆಗೆ ಎಲ್ಲಾ ಸ್ಪರ್ಧೆಗಳು ಯಶಸ್ವಿಯಾಗಿ ನಡೆಯಿತು. ಅಲ್ಲದೆ ಮಂಗಳಾ ಸಭಾಂಗಣದ ಬಳಿಯೇ ವಿದ್ಯಾರ್ಥಿಗಳಿಗೆ ಮಂಗಳೂರು ಶೈಲಿಯ ಊಟೋಪಾಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸಮಾರೋಪ: ದಕ್ಷಿಣವಲಯ ಅಂತರ್ ವಿವಿ ಯುವಜನೋತ್ಸವ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭವು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದ್ದು ವಿಜೇತರಿಗೆ ಮತ್ತು ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಕೂಡಾ ಇದೇ ಸಂದರ್ಭದಲ್ಲಿ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ನವದೆಹಲಿಯ ಅಸೋಸಿಯೇಟ್ ಆಫ್ ಇಂಡಿಯನ್ ಯುನಿವರ್ಸಿಟಿ (ಎಐಯು)ಯ ಪ್ರೊ.ಅರುಣ್ ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ, ಕುಲಸಚಿವ ಪ್ರೊ.ಟಿ.ಡಿ.ಕೆಂಪರಾಜು ಉಪಸ್ಥಿತರಿರಲಿದ್ದಾರೆ.