ಮೂಡುಬಿದಿರೆ: ವಿದ್ಯಾರ್ಥಿಗಳಿಂದ ಹೆಲ್ಮೆಟ್ ಧಾರಣೆ ಜಾಗೃತಿ ಕಾರ್ಯಕ್ರಮ
ಮೂಡುಬಿದಿರೆ, ಜ.21: ‘‘ಅಂಕಲ್...ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ...’’, ‘‘ಅಂಕಲ್.. ಹೆಲ್ಮೆಟನ್ನು ಧರಿಸಲು ಮರೆಯದಿರಿ...’’ ಹೀಗೆಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹೇಳುತ್ತಾ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಸವಾರರ ಕೈಗೆ ಬ್ಯಾಂಡ್ ಕಟ್ಟಿ ಕೆಂಗುಲಾಬಿಯನ್ನು ನೀಡಿ ಜಾಗೃತಿ ಮೂಡಿಸುವಂತಹ ಸನ್ನಿವೇಶ ಬುಧವಾರ ಬೆಳಗ್ಗೆ ತಹಶೀಲ್ದಾರ್ ಕಚೇರಿಯ ಬಳಿ ಕಂಡು ಬಂತು. ಜೇಸಿಐ ಮೂಡುಬಿದಿರೆ ತ್ರಿಭುವನ್ ಮತ್ತು ಆರಕ್ಷಕ ಠಾಣೆ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ-2016 ಅಂಗವಾಗಿ ಆಯ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧಾರಣೆ ಜಾಗೃತಿ ಕಾರ್ಯಕ್ರಮದಲ್ಲಿ ಜೀವ ರಕ್ಷಣೆಗಾಗಿ ಶಿರಸ್ತ್ರಾಣ ಬಳಸಿ, ಸುರಕ್ಷತೆಗಾಗಿ ಹೆಲ್ಮೆಟ್ ಬಳಸಿ, ಜೀವ ರಕ್ಷಣೆಗಾಗಿ ಹೆಲ್ಮೆಟ್ ಬಳಸಿ ಎಂಬ ಜಾಗೃತಿ ಮೂಡಿಸುವ ಸೂಚನಾ ಫಲಕಗಳನ್ನು ಪುಟಾಣಿ ವಿದ್ಯಾರ್ಥಿಗಳು ಹಿಡಿದುಕೊಂಡು ಎಲ್ಲಾ ವಾಹನ ಸವಾರರಿಗೂ ತೋರಿಸಿ ಅರಿವು ಮೂಡಿಸಿದ್ದು ಗಮನ ಸೆಳೆಯಿತು. ಕೆಲವರು ಹೆಲ್ಮೆಟ್ ಇದ್ದರೂ ಅದನ್ನು ಧರಿಸದೆ ವಾಹನ ಚಾಲನೆ ಮಾಡುತ್ತಿದ್ದವರನ್ನು ನಿಲ್ಲಿಸಿ ತಲೆಗೆ ಹೆಲ್ಮೆಟ್ ಧರಿಸಿ ಕಳುಹಿಸಲಾಯಿತು. ಉಳಿದಂತೆ ಕೆಲವರು ವಿದ್ಯಾರ್ಥಿಗಳು ಹೂ ಕೊಟ್ಟು ಪ್ರೀತಿಯಿಂದ ಹೇಳಿದ್ದನ್ನು ಗಮನವಿಟ್ಟು ಕೇಳಿದ ಸವಾರರು ಮುಂದೆ ಹೆಲ್ಮಟ್ ಧರಿಸುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದರಲ್ಲದೆ, ದ್ವಿಚಕ್ರ ವಾಹನದಲ್ಲಿ ಇರಿಸಲಾಗಿದ್ದ ಹೆಲ್ಮೆಟನ್ನು ತಕ್ಷಣ ತಲೆಗೇರಿಸಿಕೊಂಡದ್ದೂ ಕಂಡು ಬಂತು. ಜೇಸಿಐ ಅಧ್ಯಕ್ಷೆ ರಶ್ಮಿತಾ ಯುವರಾಜ್ ಜೈನ್ ಅಧ್ಯಕ್ಷತೆಯಲ್ಲಿ ಪುರಸಭಾಧ್ಯಕ್ಷೆ ರೂಪಾಎಸ್.ಶೆಟ್ಟಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿಗಳಾದ ಜೇಸಿ ಅಬುಲ್ ಅಲಾ, ಮಹೇಂದ್ರ ವರ್ಮ ಜೈನ್, ಧಿರೇಂದ್ರ ಜೈನ್, ರೋಟರ್ಯಾಕ್ಟ್ ಅಧ್ಯಕ್ಷ ಮಹಮ್ಮದ್ ಹಾರಿಸ್, ಮಾಜಿ ಅಧ್ಯಕ್ಷ ಸಂತೋಷ್ ಮತ್ತಿತರರು ಉಪಸ್ಥಿತಿಯಿದ್ದರು.