ಅಂಗಡಿಪದವು: ಮಾಜಿ ಗ್ರಾಪಂ ಸದಸ್ಯನಿಂದ ಸರಕಾರಿ ಬಾವಿಯ ದುರುಪಯೋಗದ ಆರೋಪ
Update: 2016-01-21 23:30 IST
ಮಂಜೇಶ್ವರ, ಜ.21: ಹೊಸಂಗಡಿ ಸಮೀಪದ ಅಂಗಡಿಪದವಿನಲ್ಲಿ ಮಾಜಿ ಗ್ರಾಮ ಪಂಚಾಯತ್ ಬಿಜೆಪಿ ಸದಸ್ಯರಾದ ನಾಗೇಶ್ ಬಿ.ಎಂ ಮನೆಯ ಕಾಮಗಾರಿಗಾಗಿ ಗ್ರಾಮ ಪಂಚಾಯತ್ ಸಾರ್ವಜನಿಕರಿಗಾಗಿ ತೋಡಿದ ಬಾವಿಯಿಂದ ಮೋಟಾರ್ ಅಳವಡಿಸಿ ನೀರು ಉಪಯೋಗಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇಲ್ಲಿನ ಗ್ರಾಮ ನಿವಾಸಿಗಳು ನೀರಿಗಾಗಿ ಪರದಾಡುತ್ತಿರುವಾಗ ಇವರು ನೀರನ್ನು ಮನೆ ಕಾಮಗಾರಿಗೆ ಬಳಸುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ. ಸಾರ್ವಜನಿಕ ಬಾವಿಗೆ ಮೋಟಾರು ಅಳವಡಿಸಿ ನೀರು ಉಪಯೋಗಿಸುವ ಬಗ್ಗೆ ಸ್ಥಳೀಯರು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಗೆ ದೂರು ನೀಡಿದ್ದರೂ ಅಧಿಕೃತರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಬಾವಿಗೆ ಮೋಟಾರು ಅಳವಡಿಸಿ ನೀರು ಬಳಕೆ ಮಾಡುವುದಕ್ಕೆ ಮಾಜಿ ಪಂಚಾಯತ್ ಉಪಾಧ್ಯಕ್ಷರೂ ಹಾಲಿ ಸದಸ್ಯರೂ ಮುಸ್ಲಿಂ ಲೀಗ್‌ನ ಯುವ ನಾಯಕ ಬೆಂಬಲ ನೀಡುತ್ತಿರುವುದಾಗಿ ಗ್ರಾಮ ನಿವಾಸಿಗಳು ತಿಳಿಸಿದ್ದಾರೆ.