ಬೈಕ್-ಲಾರಿ ಢಿಕ್ಕಿ: ಮೂವರಿಗೆ ಗಾಯ
ಪುತ್ತೂರು, ಜ.21: ಸರಕು ಸಾಗಾಟದ ಈಚರ್ ಲಾರಿ ಮತ್ತು ಬೈಕೊಂದರ ನಡುವೆ ಢಿಕ್ಕಿ ಸಂಭವಿಸಿ ಲಾರಿ ಚಾಲಕ ಸಹಿತ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಕೂಟೇಲ್ ಸೇತುವೆ ಬಳಿ ಬುಧವಾರ ನಡೆದಿದೆ.
ಅಪಘಾತದಲ್ಲಿ ಬೈಕ್ ಸವಾರರಾದ ರಾಜಶೇಖರ್(30) ಹಿಂಬದಿ ಸವಾರರಾದನಯನಾ(25) ಹಾಗೂ ಲಾರಿ ಚಾಲಕ ತಮಿಳುನಾಡು ಮೂಲದ ಶಂಕರ್(45) ಗಾಯಗೊಂಡವರು. ಈ ಪೈಕಿ ನಯನಾ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಲಾರಿಯು ರಾಜಶೇಖರ್ ಚಲಾಯಿಸುತ್ತಿದ್ದ ಪಲ್ಸರ್ ಬೈಕ್‌ಗೆ ಹಿಂಭಾಗದಿಂದ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ರಾಜಶೇಖರ್ ರಸ್ತೆ ಬದಿಯ ಪೊದೆಗೆ ಎಸೆಯಲ್ಪಟ್ಟಿದ್ದು, ಲಾರಿಯು ಬೈಕನ್ನು ಸುಮಾರು 5-6 ಮೀಟರ್‌ನಷ್ಟು ದೂರ ಎಳೆದೊಯ್ದು ಬಳಿಕ ಬೈಕ್‌ನ ಮೇಲೆಯೇ ಪಲ್ಟಿಯಾಗಿದೆ. ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ತುಸು ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.