ಸ್ಥಳೀಯರಿಗೆ ಮರಳು ದಂಧೆಕೋರರಿಂದ ಕೊಲೆ ಬೆದರಿಕೆ!
ಮಂಗಳೂರು, ಜ.21: ಕೆಂಜಾರು 3ನೆ ವಾರ್ಡ್‌ನ ಪೇರ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಮರಳು ದಂಧೆಕೋರರು ಮಂಗಳವಾರ ರಾತ್ರಿ ಮತ್ತೆ ಸ್ಥಳೀಯರಿಗೆ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ. ಸ್ಥಳೀಯರ ಮೊಬೈಲ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಬಗ್ಗೆ ಸ್ಥಳೀಯರೊಬ್ಬರು ಇಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ಮಂಗಳವಾರ ರಾತ್ರಿ ನನಗೆ ಕರೆ ಮಾಡಿದ ಮರಳು ದಂಧೆಕೋರರಲ್ಲಿ ಒಬ್ಬಾತ , ಒಮ್ಮೆ ನಮ್ಮ ಪರವಾನಿಗೆ ನವೀಕರಣಗೊಳ್ಳಲಿ. ಆಮೇಲೆ ನಿಮ್ಮನ್ನೆಲ್ಲಾ ನೋಡಿಕೊಳ್ಳುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಬುಧವಾರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅವರನ್ನು ಕರೆದು ವಿಚಾರಿಸುವುದಾಗಿ ಹೇಳಿ ಸುಮ್ಮನಿದ್ದರು. ಇಂದು ಮತ್ತೆ ಠಾಣೆಗೆ ಹೋಗಿ ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಮತ್ತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ’ ಎಂದು ಸ್ಥಳೀಯರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ. ಇಲ್ಲಿ ಮಹಿಳೆಯರಿಗೂ ಬೆದರಿಕೆ ಕರೆಗಳು ಬಂದಿದ್ದು, ಆದರೆ ಅವರೆಲ್ಲಾ ದೂರು ನೀಡಲು ಹಿಂಜರಿಯು ತ್ತಿದ್ದಾರೆ. ಮರುಳುಗಾರಿಕೆ ಪರವಾನಿಗೆ ನವೀಕರಣವಾಗದಿದ್ದರೂ ಇಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವ ಮರಳು ದಂಧೆ ಕೋರರಿಂದ ಸ್ಥಳೀಯರು ಈಗಾಗಲೇ ಪ್ರಾಣಭೀತಿಯನ್ನು ಎದುರಿಸುತ್ತಿದ್ದಾರೆ. ನಮ್ಮ ಗ್ರಾಮದಿಂದ ಮಳವೂರು ಮೂಲಕ ನಗರಕ್ಕೆ ಸಂಪರ್ಕ ಪಡೆಯಲು ನಾವು ಮರಳುಗಾರಿಕೆ ನಡೆಸುತ್ತಿರುವ ಸ್ಥಳದಿಂದಲೇ ಸಾಗಿ ಹೋಗಬೇಕು. ರಸ್ತೆಯಲ್ಲಿನ ಧೂಳು, ಮರಳು ಹಾಗೂ ಮರಳು ದಂಧೆಕೋರರ ಗೂಂಡಾಗಿರಿಯಿಂದ ನಾವು ಈಗಾಗಲೇ ಬೇಸತ್ತಿದ್ದೇವೆ. ಗಣಿಗಾರಿಕೆ ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಸೂಕ್ತ ಕ್ರಮವಾಗಿಲ್ಲ. ಒಟ್ಟಿನಲ್ಲಿ ನಾವು ಬದುಕುವುದೇ ಕಷ್ಟಕರವಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟಾಗಿಯೂ ನಿನ್ನೆ ರಾತ್ರಿ ಮತ್ತೆ ಇಲ್ಲಿಂದ ಮರಳು ಸಾಗಾಟ ನಡೆದಿದೆ. ಅಧಿಕಾರಿಗಳು ಮಾತ್ರ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ ನಾವು ನಮ್ಮ ಸಂಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ಸ್ಥಳೀಯರ ಆತಂಕ.