ಜನಾಕ್ರೋಶಕ್ಕೆ ಮಣಿದ ಹೈದರಾಬಾದ್ ವಿವಿ: ನಾಲ್ವರು ದಲಿತ ವಿದ್ಯಾರ್ಥಿಗಳ ಅಮಾನತು ರದ್ದು
ಹೈದರಾಬಾದ್, ಜ.21: ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಘಟನೆಯ ಬಗ್ಗೆ ರಾಷ್ಟ್ರಾದ್ಯಂತ ಜನಾಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಹೈದರಾಬಾದ್ ವಿವಿಯ ಕಾರ್ಯಕಾರಿ ಮಂಡಳಿಯು, ಅಂಬೇಡ್ಕರ್ ವಿದ್ಯಾರ್ಥಿ ಅಸೋಸಿಯೇಶನ್ (ಎಎಸ್‌ಎ)ಗೆ ಸೇರಿದ ನಾಲ್ವರು ದಲಿತ ಸಂಶೋಧನಾ ವಿದ್ಯಾರ್ಥಿಗಳ ಅಮಾನತು ಆದೇಶವನ್ನು ಗುರುವಾರ ಹಿಂದೆಗೆದುಕೊಂಡಿದೆ.
ಎಬಿವಿಪಿ ಕಾರ್ಯಕರ್ತನೊಬ್ಬನ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ, ವಿವಿಯ ಕಾರ್ಯಕಾರಿ ಮಂಡಳಿಯು ರೋಹಿತ್ ವೇಮುಲ ಹಾಗೂ ಇತರ ನಾಲ್ವರು ದಲಿತ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿತ್ತು.
‘‘ವಿಶ್ವವಿದ್ಯಾನಿಲಯದಲ್ಲಿ ಉದ್ಭವಿಸಿರುವ ಅಸಾಧಾ ರಣ ಸನ್ನಿವೇಶವನ್ನು ಪರಿಗಣಿಸಿ ಹಾಗೂ ಈ ಬಗ್ಗೆ ವಿಸ್ತೃತ ವಾಗಿ ಚರ್ಚಿಸಿದ ಬಳಿಕ, ನಾಲ್ವರು ವಿದ್ಯಾರ್ಥಿಗಳ ಅಮಾನತು ಆದೇಶವನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ’’ ಎಂದು ಹೈದರಾಬಾದ್ ವಿವಿಯ ಹೇಳಿಕೆಯೊಂದು ತಿಳಿಸಿದೆ.
ದಲಿತ ವಿದ್ಯಾರ್ಥಿಗಳ ಅಮಾನತು ರದ್ದುಪಡಿಸುವಂತೆ ಆಗ್ರಹಿಸಿ ಸೆಪ್ಟಂಬರ್ 10ರಂದು ವಿವಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿಯನ್ನು ಆಧರಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆಯೆಂದು ಹೇಳಿಕೆ ತಿಳಿಸಿದೆ. ಅಮಾನತುಗೊಂಡಿದ್ದ ಐದನೆ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿಗೆ ಶರಣಾದ ನಾಲ್ಕು ದಿನಗಳ ಬಳಿಕ, ಅಮಾನತು ಆದೇಶವನ್ನು ಹಿಂದೆಗೆದುಕೊಳ್ಳಲಾಗಿದೆ. ಆದಾಗ್ಯೂ, ಈ ವಿದ್ಯಾರ್ಥಿಗಳ ಅಮಾನತಿಗೆ ಕಾರಣವಾದ, ಆಗಸ್ಟ್ 3ರಂದು ಎಎಸ್‌ಎ ಹಾಗೂ ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳ ನಡುವೆ ನಡೆದ ಘರ್ಷಣೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲು ವಿವಿ ನಿರ್ಧರಿಸಿದೆ.