×
Ad

ಎಬಿವಿಪಿಯಿಂದ ಹಿರಿಯ ಪತ್ರಕರ್ತ ವರದರಾಜನ್ ಒತ್ತೆಸೆರೆ!

Update: 2016-01-21 23:37 IST

ಅಲಹಾಬಾದ್, ಜ.21: ಹಿರಿಯ ಪತ್ರಕರ್ತ, ದಿ ಹಿಂದು ಪತ್ರಿಕೆಯ ಮಾಜಿ ಸಂಪಾದಕ ಸಿದ್ಧಾರ್ಥ ವರದರಾಜನ್ ಅವರು ಬುಧವಾರ ಅಲಹಾ ಬಾದ್ ವಿವಿಯಲ್ಲಿ ಎಬಿವಿಪಿಯ ಒತ್ತೆಯಾಳಾಗಿದ್ದು, ಪೊಲೀಸರು ಅವರನ್ನು ರಕ್ಷಿಸಿ ಹೊರಗೆ ಕರೆತರುವಂತಾಗಿತ್ತು. ವರದ ರಾಜನ್ ‘ದೇಶದ್ರೋಹಿ’ ಎನ್ನುವುದು ಎಬಿವಿಪಿಯ ಆರೋಪ.

ಅಲಹಾಬಾದ್ ವಿವಿ ವಿದ್ಯಾರ್ಥಿ ಒಕ್ಕೂಟ (ಎಯುಎಸ್‌ಯು)ದ ಅಧ್ಯಕ್ಷೆ ರಿಚಾ ಸಿಂಗ್ ಅವರು ಆಯೋಜಿಸಿದ್ದ ‘ಪ್ರಜಾಪ್ರಭುತ್ವ,ಮಾಧ್ಯಮಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ’ಕುರಿತು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲೆಂದು ವರದರಾಜನ್ ಆಗಮಿಸಿದ್ದರು. ವರದರಾಜನ್ ಆಹ್ವಾನವನ್ನು ಸ್ವೀಕರಿಸಿದಾಗಿನಿಂದ ಎಬಿವಿಪಿ ನಾಯಕರು ಉಪವಾಸ ಮುಷ್ಕರ ಆರಂಭಿಸಿದ್ದರು.

ವರದರಾಜನ್ ಮುಖಕ್ಕೆ ಮಸಿ ಬಳಿಯಲು ಮತ್ತು ಅವರ ಮೇಲೆ ಮೊಟ್ಟೆಗಳನ್ನು ಎಸೆಯಲು ಎಬಿವಿಪಿ ಯೋಜಿಸಿತ್ತು. ಆದರೆ ರಿಚಾ ಸಿಂಗ್ ಅದನ್ನು ವಿಫಲಗೊಳಿಸಿದರು. ಎಬಿವಿಪಿ ಒತ್ತಡಕ್ಕೆ ಮಣಿದ ವಿವಿ ಅಧಿಕಾರಿಗಳು ಸೆನೆಟ್ ಹಾಲ್‌ನಲ್ಲಿ ವಿಚಾರ ಸಂಕಿರಣಕ್ಕೆ ಅನುಮತಿಯನ್ನು ನಿರಾಕರಿಸಿದ್ದರು. ಯೂನಿಯನ್ ಕಟ್ಟಡದಲ್ಲಿ ಕಾರ್ಯಕ್ರಮ ನಡೆಸಲು ರಿಚಾ ಸಿಂಗ್ ನಿರ್ಧರಿಸಿದ್ದರಾದರೂ ಎಬಿವಿಪಿ ನಾಯಕರು ಅದಕ್ಕೆ ಬೀಗ ಜಡಿದಿದ್ದರಿಂದಅದು ಸಾಧ್ಯವಾಗಿರಲಿಲ್ಲ.

ಅಂತಿಮವಾಗಿ ಕ್ಯಾಂಪಸ್‌ನ ಹೊರಗಿರುವ ಸ್ವರಾಜ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವರದರಾಜನ್ ಬಳಿಕ ಕುಲಪತಿಗಳನ್ನು ಭೇಟಿಯಾಗಲೆಂದು ರಿಚಾ ಸಿಂಗ್ ಜೊತೆ ಅವರ ಕಚೇರಿಗೆ ಆಗಮಿಸಿದ್ದರು. ತಕ್ಷಣವೇ ಕಚೇರಿಗೆ ಮುತ್ತಿಗೆ ಹಾಕಿದ ಎಬಿವಿಪಿ ಕಾರ್ಯಕರ್ತರು ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಅರ್ಧ ಗಂಟೆಗೂ ಹೆಚ್ಚು ಕಾಲ ತಮ್ಮ ಬಂಧಿಯನ್ನಾಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News