ಚೀನಾದಲ್ಲಿ ಭೀಕರ ಚಳಿ: ಕಂಗೆಟ್ಟ ಜನರು, ಮುಚ್ಚಿದ ಶಾಲೆಗಳು
ಬೀಜಿಂಗ್, ಜ. 21: ಥರಗುಟ್ಟುವ ಐತಿಹಾಸಿಕ ಚಳಿಯನ್ನು ಎದುರಿಸಲು ಚೀನಾ ಸಜ್ಜಾಗುತ್ತಿದ್ದು, ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ತುರ್ತು ಪರಿಸ್ಥಿತಿ ನಿಭಾಯಿಸುವ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ದೇಶದ ಕೆಲವು ಸ್ಥಳಗಳಲ್ಲಿ ಉಷ್ಣತೆಯು 30 ವರ್ಷಗಳಷ್ಟು ಹಿಂದಿನ ಮಟ್ಟಕ್ಕೆ ಕುಸಿಯಬಹುದು ಎಂದು ಸರಕಾರ ಮತ್ತು ಸರಕಾರಿ ಮಾಧ್ಯಮಗಳು ಗುರುವಾರ ಎಚ್ಚರಿಸಿವೆ.
ಗುರುವಾರ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಇನ್ನರ್ ಮಂಗೋಲಿಯದ ಯಕೇಶಿಯಲ್ಲಿ ಮೈನಸ್ 28 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಯಿತು. ಅದೇ ವೇಳೆ, ಹೀಲೊಗಿಜಾಂಗ್ ರಾಜ್ಯದ ರಾಜಧಾನಿ ಹರ್ಬಿನ್‌ನಲ್ಲಿ ಮೈನಸ್ 19 ಡಿಗ್ರಿ ಸೆಲ್ಸಿಯಸ್ ಮತ್ತು ನೆರೆಯ ಜಿಲಿನ್ ರಾಜ್ಯದ ಚಂಗ್‌ಚುನ್‌ನಲ್ಲಿ ಮೈನಸ್ 17 ಡಿಗ್ರಿ ಸೆಲ್ಸಿಯಸ್ ಉಷ್ಣತೆ ನೆಲೆಸಿತು.
ಕ್ಸಿನ್‌ಜಿಯಾಂಗ್ ರಾಜ್ಯದ ಅಲ್ಟಾಯಿಯಲ್ಲಿ ಉಷ್ಣತೆ ಮೈನಸ್ 26 ಡಿಗ್ರಿಗೆ ಕುಸಿದಿದೆ. ‘‘ಗಾಳಿ ಬಲವಾಗಿ ಬೀಸುತ್ತಿದೆ. ಅದು ನನ್ನ ಮುಖಕ್ಕೆ ರಾಚುವಾಗ ಭಯಾನಕ ನೋವಾಗುತ್ತದೆ’’ ಎಂದು ಇಲ್ಲಿನ ನಿವಾಸಿಯೊಬ್ಬರು ಹೇಳಿದರು.
ಮುಂದಿನ ನಾಲ್ಕು ದಿನಗಳ ಅವಧಿಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಉಷ್ಣತೆ 10 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿಯಲಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಜಗತ್ತಿನ ಅತ್ಯಂತ ಜನಭರಿತ ದೇಶದ 90 ಶೇಕಡ ಭಾಗದಲ್ಲಿ ಉಷ್ಣತೆಯು ಸೊನ್ನೆ ಡಿಗ್ರಿಗಿಂತಲೂ ಕಡಿಮೆಯಾಗಿದೆ.
ಶನಿವಾರದ ವೇಳೆಗೆ ಬೀಜಿಂಗ್‌ನ ಉಷ್ಣತೆ ಮೈನಸ್ 17 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.