ಎಬಿವಿಪಿ ನಾಯಕನಿಂದ ಸುಳ್ಳು ಹೇಳಿಕೆ: ಪೊಲೀಸರ ಸ್ಪಷ್ಟನೆ
ಹೈದರಾಬಾದ್,ಜ.21: ಕಳೆದ ವರ್ಷ ಅಂಬೇಡ್ಕರ್ ವಿದ್ಯಾರ್ಥಿ ಸಂಘ(ಎಎಸ್‌ಎ)ದ ಸದಸ್ಯರು ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂಬ ಎಬಿವಿಪಿ ನಾಯಕ ಸುಶೀಲ ಕುಮಾರ್ ಹೇಳಿಕೆಯು ಉತ್ಪ್ರೇಕ್ಷೆಯಿಂದ ಕೂಡಿದೆ ಎಂದು ಸೈಬರಾಬಾದ್ ಪೊಲೀಸರು ಮತ್ತು ಹೈದರಾಬಾದ್ ವಿವಿಯ ಅಧಿಕಾರಿಗಳು ಬುಧವಾರ ಹೈದರಾಬಾದ್ ಉಚ್ಚ ನ್ಯಾಯಾಲಯದಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಎಬಿವಿಪಿ ಮತ್ತು ಎಎಸ್‌ಎ ಕಾರ್ಯಕರ್ತರ ಹೊಯ್‌ಕೈ ಬಳಿಕ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರು ಎಎಸ್‌ಎ ಸದಸ್ಯರು ಕುಮಾರ್‌ಗೆ ಥಳಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಪಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿಯವರಿಗೆ ಪತ್ರವನ್ನು ಬರೆದಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ನೀಡಿರುವ ಈ ಹೇಳಿಕೆಗಳು ಭಾರೀ ಮಹತ್ವವನ್ನು ಪಡೆದುಕೊಂಡಿವೆ. ಆತ್ಮಹತ್ಯೆ ಮಾಡಿಕೊಂಡಿರುವ ರೋಹಿತ್ ವೇಮುಲಾ ಮತ್ತು ಇತರ ನಾಲ್ವರು ದಲಿತ ವಿದ್ಯಾರ್ಥಿಗಳ ಉಚ್ಚಾಟನೆಗೆ ಈ ಘಟನಾವಳಿಗಳು ನಾಂದಿ ಹಾಡಿದ್ದವು.
ವಿವಿ ಆವರಣದಲ್ಲಿ ತನ್ನ ಪುತ್ರನಿಗೆ ರಕ್ಷಣೆ ನೀಡಬೇಕೆಂದು ಕೋರಿ ಕುಮಾರ್ ತಾಯಿ ವಿನಯಾ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಪೊಲೀಸರು ಮತ್ತು ವಿವಿ ಅಧಿಕಾರಿಗಳು, ಕಳೆದ ವರ್ಷದ ಆಗಸ್ಟ್‌ನಲ್ಲಿ ಕ್ಯಾಂಪಸ್‌ನಲ್ಲಿ ಎಬಿವಿಪಿ ಮತ್ತು ಎಎಸ್‌ಎ ಕಾರ್ಯಕರ್ತರ ನಡುವಿನ ಹೊಡೆದಾಟದಲ್ಲಿ ಕುಮಾರ್‌ಗೆ ಭುಜದ ಮೇಲೆ ಸಣ್ಣ ತರಚಿದ ಗಾಯಗಳಷ್ಟೇ ಆಗಿದ್ದವು ಎಂದು ಸ್ಪಷ್ಟಪಡಿಸಿದ್ದಾರೆ.
ಕುಮಾರ್ ಆ.3ರಂದು ಪೊಲೀಸರಿಗೆ ಸಲ್ಲಿಸಿದ್ದ ದೂರಿನಲ್ಲಿ ಎಎಸ್‌ಎದ 40 ಸದಸ್ಯರು ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರಿಕೊಂಡಿದ್ದರು. ದಲಿತ ವಿದ್ಯಾರ್ಥಿಗಳ ಹಲ್ಲೆಯಿಂದಾಗಿ ಕುಮಾರ್ ರಕ್ತವಾಂತಿ ಮಾಡಿಕೊಳ್ಳುತ್ತಿದ್ದು, ಶ್ವಾಸಕೋಶಗಳಲ್ಲಿ ನೋವಾಗುತ್ತದೆ ಎಂದು ದೂರಿಕೊಂಡಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಬಿವಿಪಿ ಬಳಿಕ ಹೇಳಿತ್ತು.
ವಿವಿಯ ಪರವಾಗಿ ಪ್ರಮಾಣಪತ್ರವನ್ನು ಸಲ್ಲಿಸಿರುವ ಕುಲಸಚಿವ ಬಿ.ಪಾಂಡು ರೆಡ್ಡಿ ಅವರು ಘಟನೆಯ ಬಗ್ಗೆ ಶಿಸ್ತುಪಾಲನಾ ಮಂಡಳಿಯ ವರದಿ,ಆ.4ರಂದು ಕುಮಾರ್ ದಾಖಲಾಗಿದ್ದ ವೈದ್ಯರ ವರದಿಯನ್ನು ಉಲ್ಲೇಖಿಸಿ ಕುಮಾರ್‌ಗೆ ತರಚಿದ ಗಾಯಗಳಷ್ಟೇ ಆಗಿದ್ದವು ಎಂದು ತಿಳಿಸಿದ್ದಾರೆ.
ಹೈದರಾಬಾದ್‌ನ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಅವರೂ ಕುಮಾರ್‌ಗೆ ಸಣ್ಣಪುಟ್ಟ ಗಾಯಗಳು ಮಾತ್ರ ಆಗಿದ್ದವು ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಇದಿಷ್ಟೇ ಅಲ್ಲ, ಕುಮಾರನ ತಾಯಿ ತನ್ನ ಪುತ್ರನ ಬಗ್ಗೆ ಸಹಾನುಭೂತಿಯನ್ನು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಪಾಂಡು ರೆಡ್ಡಿ ಹೇಳಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಜ.25ರಂದು ನಡೆಯಲಿದೆ.