×
Ad

ನೃತ್ಯ ಸಾಮ್ರಾಜ್ಞಿ ಸಾರಾಭಾಯಿ ನಿಧನ

Update: 2016-01-21 23:50 IST

ಹೊಸದಿಲ್ಲಿ, ಜ.21: ಭಾರತೀಯ ಶಾಸ್ತ್ರೀಯ ನೃತ್ಯ ಸಾಮ್ರಾಜ್ಞಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ, ಮೃಣಾಲಿನಿ ಸಾರಾಭಾಯಿ ಗುರುವಾರ ಮುಂಜಾನೆ ನಿಧನರಾಗಿದ್ದಾರೆ. ಅವರು ಭಾರತದ ಬಾಹ್ಯಾಕಾಶ ಯೋಜನೆಯ ಜನಕ, ವಿಕ್ರಂ ಸಾರಾಭಾಯಿಯವರ ಪತ್ನಿ. ಮೃಣಾಲಿನಿಯವರಿಗೆ 97 ವರ್ಷ ವಯಸ್ಸಾಗಿತ್ತು.


ಅವರನ್ನು ಪ್ರೀತಿಯಿಂದ ‘ಅಮ್ಮ’ ಎಂದೇ ಕರೆಯಲಾಗುತ್ತಿತ್ತು.


ಮೃಣಾಲಿನಿಯವರಿಗೆ ಸೋಂಕೊಂದು ತಗಲಿ ಆರೋಗ್ಯ ಹದಗೆಡುತ್ತ ಬಂದಿತ್ತು. ಅವರನ್ನು ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಯುಸಿರೆಳೆಯುವ ವೇಳೆ ಅಮ್ಮನ ಬಳಿಯಲ್ಲಿ ಪುತ್ರ, ಪರಿಸರ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ತಿಕೇಯ ಸಾರಾಭಾಯಿ ಹಾಗೂ ಪುತ್ರಿ, ಖ್ಯಾತ ನೃತ್ಯಗಾರ್ತಿ ಮಲ್ಲಿಕಾ ಸಾರಾಭಾಯಿ ಇದ್ದರು.


ಮೃಣಾಲಿನಿ, ನೃತ್ಯ, ನಾಟಕ, ಸಂಗೀತ ಹಾಗೂ ಗೊಂಬೆಯಾಟಗಳಿಗಾಗಿ ಅಹ್ಮದಾಬಾದ್ ನಗರದಲ್ಲಿ ಪ್ರದರ್ಶನ ಕಲೆಗಳ ದರ್ಪಣ ಅಕಾಡಮಿಯನ್ನು ಸ್ಥಾಪಿಸಿದ್ದರು. 1942ರಲ್ಲಿ ವಿಕ್ರಂ ಸಾರಾಭಾಯಿಯವರನ್ನು ವಿವಾಹವಾಗಿದ್ದ ಅವರು, 300ಕ್ಕೂ ಹೆಚ್ಚು ನೃತ್ಯ ನಾಟಕಗಳನ್ನು ಸಂಯೋಜಿಸಿದ್ದರು ಹಾಗೂ ಅನೇಕ ಕಾದಂಬರಿಗಳು, ಕವಿತೆಗಳು, ನಾಟಕಗಳು ಹಾಗೂ ಮಕ್ಕಳ ಕತೆಗಳನ್ನು ಬರೆದಿದ್ದರು.

ಮೃಣಾಲಿನಿ, ಗುಜರಾತ್ ರಾಜ್ಯ ಕರಕುಶಲ ವಸ್ತು ಮತ್ತು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿದ್ದರಲ್ಲದೆ, ಸರ್ವೋದಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವಿಶ್ವಸ್ತೆ ಹಾಗೂ ಅಭಿವೃದ್ಧಿಗಾಗಿ ನೆಹರೂ ಪ್ರತಿಷ್ಠಾನದ (ಎಸ್‌ಎಫ್‌ಡಿ) ಅಧ್ಯಕ್ಷೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News