‘ಭಾರತ್ ಭ್ರಮಣ್’ ನಿರತ ಎಂಐಟಿ ಪ್ರಾಧ್ಯಾಪಕ ಶಮೀಮ್
ಮಣಿಪಾಲ, ಜ.21: ಏಕಾಂಗಿಯಾಗಿ ಬೈಸಿಕಲ್‌ನಲ್ಲಿ ಇಡೀ ಭಾರತ ದೇಶವನ್ನು ಸುತ್ತಿ ಬರಬೇಕೆಂಬ ತನ್ನ ಎರಡು ವರ್ಷಗಳ ಕನಸನ್ನು ನನಸು ಮಾಡಲು ಹೊರಟಿರುವ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಪ್ರಾಧ್ಯಾ ಪಕ ಎಸ್.ಎಸ್.ಎಸ್.ಶಮೀಮ್ ಇದೀಗ ಸಾಧನೆಯ ಮೊದಲ ಹಂತವನ್ನು ಪೂರ್ಣಗೊಳಿಸಿದ್ದಾರೆ.
ಎಂಐಟಿಯಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗ ದಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಶಮೀಮ್ ತನ್ನ ಸಾಹಸವನ್ನು ‘ಭಾರತ್ ಭ್ರಮಣ್’, ‘ರೈಡ್-4-ಫ್ರೈಡ್’ ಎಂದು ಕರೆಯುತ್ತಾರೆ. ಬೆಂಗಳೂರಿನಿಂದ ಪ್ರಾರಂಭಗೊಂಡ ಅವರ ಈ ಸಾಹಸದ ಮೊದಲ ಲೆಗ್ ಒರಿಸ್ಸಾದ ಕೋರಾಪುಟ್‌ನಲ್ಲಿ ಕೊನೆಗೊಂಡಿದೆ. 1,500 ಕಿ.ಮೀ. ದೂರವನ್ನು ತಾನು ಕೇವಲ 9 ದಿನಗಳಲ್ಲಿ ಪೂರ್ಣಗೊಳಿಸಿದ್ದೇನೆ ಎಂದು ಶಮೀನ್ ಹೆಮ್ಮೆಯಿಂದ ಹೇಳುತ್ತಾರೆ.
‘ಪೂರ್ವ ಘಟ್ಟವನ್ನು ಹಾದುಹೋಗುವ ಪ್ರಯಾಣ ಸ್ವಲ್ಪ ಕಠಿಣವಿತ್ತು. ಅದು ಬಿಟ್ಟರೆ ಮೊದಲ ಲೆಗ್‌ನ ಈ ಪ್ರಯಾಣದಿಂದ ಖುಷಿಯಾಗಿದ್ದೇನೆ. ಮುಂದೆ ಇಂತಹ ಹಲವು ಏಕಾಂಗಿ ಸೈಕಲ್ ಯಾನವನ್ನು ಕೈಗೊಳ್ಳುವ ಬಗ್ಗೆ ನಾನು ಯೋಜನೆಗಳನ್ನು ರೂಪಿಸು ತ್ತಿದ್ದೇನೆ’ ಎಂದು ಶಮೀಮ್ ತಿಳಿಸಿದರು.
‘ನನ್ನ ಸೈಕಲ್ ಮೇಲೆ ಪ್ರಯಾಣ ಡಿ.18ರಂದು ಬೆಂಗಳೂರಿನಿಂದ ಪ್ರಾರಂಭಗೊಂಡಿತು. ಹೈದರಾ ಬಾದ್, ವಿಜಯವಾಡ, ವಿಶಾಲಪಟ್ಟಣ ಹಾಗೂ ಸಲೂರ್ ಮೂಲಕ ಡಿ.26ರಂದು ಒರಿಸ್ಸಾದ ಕೋರಾ ಪುಟ್ ತಲುಪಿದೆ’ ಎಂದು ಹೇಳಿದ ಶಮೀಮ್, ‘ಈ ಸಾಹಸಕ್ಕಾಗಿ ನಾನು ಕಳೆದ ಎರಡು ವರ್ಷಗಳಿಂದ ತಯಾರಿಯನ್ನು ನಡೆಸುತ್ತಿದ್ದೆ’ ಎಂದರು. ನನ್ನ ಮುಂದಿನ ಸೈಕ್ಲಿಂಗ್ ಯಾತ್ರೆ ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಮತ್ತೆ ನಡೆಯಲಿದೆ. ಈ ಬಾರಿ ರಾತ್ರಿಯ ವೇಳೆ ರೈಲ್ವೆ ನಿಲ್ದಾಣ, ಪೊಲೀಸ್ ಸ್ಟೇಶನ್, ಧಾರ್ಮಿಕ ಕೇಂದ್ರಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಮಲಗಿದ್ದಾಗಿ ತಿಳಿಸಿದರು.
ಶಮೀಮ್ ಕೇವಲ ಸೈಕಲ್ ಸಾಹಸಿ ಮಾತ್ರವಲ್ಲ. ಅವರು ಒಳ್ಳೆಯ ಮ್ಯಾರಥಾನ್ ಓಟಗಾರ ಸಹ. ತನ್ನೆರಡು ಹವ್ಯಾಸಗಳನ್ನು ಸರದಿಯಂತೆ ನಡೆಸಲು ಅವರು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಬೇಸಿಗೆ ಸಮಯದಲ್ಲಿ ಓಟವನ್ನು, ಡಿಸೆಂಬರ್ ತಿಂಗಳಲ್ಲಿ ಸೈಕ್ಲಿಂಗ್‌ನ್ನು ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ.
ಮಹತ್ವಾಕಾಂಕ್ಷಿಯಾಗಿರುವ ಶಮೀಮ್ ‘ಹಾಫ್ ಮ್ಯಾರಥಾನ್ (21.1 ಕಿ.ಮೀ.) ಓಟದಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ದಾಖಲಿಸುವ ಸಂಕಲ್ಪ ಮಾಡಿದ್ದಾರೆ. ಅದರಂತೆ ಅವರು 70 ದಿನಗಳಲ್ಲಿ 111 ಹಾಫ್ ಮ್ಯಾರಥಾನ್‌ನ್ನು ಓಡಲು ನಿರ್ಧರಿಸಿದ್ದು, ಅದಕ್ಕಾಗಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈ ಸಾಹಸಕ್ಕೆ ಅವರು ‘ಭಾಗ್-ರನ್ ಯೋಜನೆ’ ಎಂದು ಹೆಸರಿಸಿದ್ದಾರೆ. ಈ ಕುರಿತು ಲಿಮ್ಕಾದಿಂದ ವಿವರಗಳನ್ನು ಕೇಳಿದ್ದು, ಉಡುಪಿ ಮತ್ತು ಮಂಗಳೂರಿನ ಅಥ್ಲೆಟಿಕ್ ಅಸೋಸಿಯೇಶನ್‌ಗಳ ನೆರವಿನೊಂದಿಗೆ ತನ್ನ ಸಾಹಸಕ್ಕೆ ಮುನ್ನುಗ್ಗುವ ಇರಾದೆಯನ್ನು ಹೊಂದಿದ್ದಾರೆ.
‘ನನ್ನ ಉದ್ದೇಶ ಈ ದೇಶದ ವೈವಿಧ್ಯತೆಯನ್ನು ಸಮೀಪದಿಂದ ನೋಡುವುದು ಮತ್ತು ಅದರ ಬಗ್ಗೆ ತಿಳಿದುಕೊಳ್ಳುವುದಾಗಿದೆ. ನಾನು ಏನೇನು ಮಾಡಬೇಕೆಂದಿದ್ದೇನೊ ಅವುಗಳನ್ನು ಸಾಧ್ಯವಿದ್ದಾ ಗಲೇ ಮಾಡುವುದು ನನ್ನ ಗುರಿ. ಸೈಕಲ್ ಮೇಲೆ ದೇಶವನ್ನು ಸುತ್ತುವುದು ನನಗೆ ಅತೀವ ಸಂತೃಪ್ತಿಯನ್ನು ನೀಡು ತ್ತಿದೆ. ನನ್ನೆಲ್ಲಾ ಸಾಹಸಗಳನ್ನು ಮುಗಿಸಿದಾಗ ನಾನೊಬ್ಬ ಅತ್ಯಂತ ಸಂತೃಪ್ತ ವ್ಯಕ್ತಿಯಾಗಿರುತ್ತೇನೆ.ಮುಂದೆ ನನ್ನೆಲ್ಲಾ ಸಾಧನೆಗಳನ್ನು ಹೆಮ್ಮೆಯಿಂದ ಮೆಲುಕು ಹಾಕುತ್ತಿರುತ್ತೇನೆ’.