ಜಿಪಂ-ತಾಪಂ ಚುನಾವಣೆ: ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಯಲ್ಲಿರಿಸಲು ಸೂಚನೆ
Update: 2016-01-22 00:00 IST
ಉಡುಪಿ, ಜ.21: ಉಡುಪಿ ಜಿಲ್ಲೆಯಲ್ಲಿ ಫೆ.20ರಂದು ನಡೆಯಲಿರುವ ತಾಪಂ/ಜಿಪಂ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಫೆ.21ರಿಂದ 24ರವರೆಗೆ ಯಾವುದೇ ಆಯುಧ/ಶಸ್ತ್ರಾಸ್ತ್ರ/ಮಾರಕಾಯುಧಗಳು ಮತ್ತು ಮದ್ದುಗುಂಡುಗಳೊಂದಿಗೆ ಸಂಚರಿಸುವುದನ್ನು ಮತ್ತು ಅವುಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದ್ದರಿಂದ ಉಡುಪಿ ಜಿಲ್ಲೆಯಲ್ಲಿ ಶಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ಅಧಿಕೃತ ಪರವಾನಿಗೆದಾರರು ತಮ್ಮಲ್ಲಿರುವ ಎಲ್ಲ ವಿಧದ ಶಸ್ತ್ರಾಸ್ತ್ರಗಳನ್ನು ತಮ್ಮ ವಿಳಾಸ ವ್ಯಾಪ್ತಿಯ ಹತ್ತಿರದ ಪೊಲೀಸ್ ಠಾಣೆಯಲ್ಲಿ ಮಾತ್ರ ಕಡ್ಡಾಯವಾಗಿ ವಿಳಂಬ ಮಾಡದೆ ತಕ್ಷಣ ಠೇವಣಿ ಇರಿಸಿ ರಶೀದಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಆದೇಶ ಹೊರಡಿಸಿದ್ದಾರೆ.