×
Ad

ಸರಕಾರಿ ಶಾಲೆಗಳಿಗೆ ಆಟಿಕೆ ಮತ್ತು ವಿಜ್ಞಾನ ಮಾದರಿಗಳ ವಿತರಣೆ

Update: 2016-01-22 14:45 IST

ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ ದಯಾಳ್ ಬಾಗ್ ಗ್ರಾಮಾಭಿವೃದ್ಧಿ ಯೋಜನೆ ವಿಮುಕ್ತಿ ವತಿಯಿಂದ ದಾನಿಗಳ ಸಹಾಯದಿಂದ ಆಯ್ದ ಶಾಲೆಗಳಿಗೆ ಆಟಿಕೆ ಸಾಮಗ್ರಿಗಳು ಮತ್ತು ವಿಜ್ಞಾನ ಮಾದರಿಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯಾತಿಥಿಗಳಾಗಿ ಆಗಮಿಸಿದ ಬೆನಕ ಹೆಲ್ತ್ ಸೆಂಟರ್‌ನ ಸಾರ್ಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ಮಾತನಾಡುತ್ತಾ, ವಿಮುಕ್ತಿ ಸಂಸ್ಥೆಯು ನಡೆಸುವಂತಹ ಪ್ರತೀ ಸಮಾಜಮುಖಿ ಕಾರ್ಯವು ಶ್ಲಾಘನೀಯವಾದುದು. ಅಧ್ಯಾಪಕರು ಮಕ್ಕಳನ್ನು ಪ್ರೀತಿ ಮತ್ತು ಪ್ರಾಮಾಣಿಕತೆಯಿಂದ ಬೆಳೆಸಬೇಕು, ಸಮಾಜ ನಮಗೆ ಏನನ್ನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನನ್ನು ಕೊಡುವೆವು ಎನ್ನುವುದು ಮುಖ್ಯವಾಗುತ್ತದೆ. ಸರಕಾರಿ ಉದ್ಯೋಗ ಎಲ್ಲರಿಗೂ ಬೇಕು, ಆದರೆ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವಲ್ಲಿ ಹಿಂಜರಿತ್ತಾರೆ, ಸರಕಾರಿ ಶಾಲೆಗಳ ಕುರಿತು ನಮ್ಮಲ್ಲಿರುವಂತಹ ಮನೋಭಾವ ಬದಲಾಗಬೇಕು ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ವಿನೋದ್ ಮಾಸ್ಕರೆನ್ಹಸ್ ರವರು ಮಾತನಾಡುತ್ತಾ, ಶಾಲೆಗಳಲ್ಲಿ ಮಕ್ಕಳ ಜೀವನ ರೂಪುಗೊಳ್ಳುವುದು, ಮಕ್ಕಳಿಗೆ ಕಲಿಕಾಪೂರಕವಾದಂತಹ ವಾತವರಣವನ್ನು ಕಲ್ಪಿಸಿಕೊಟ್ಟು ಮಕ್ಕಳ ಬೆಳವಣಿಗೆಗೆ ಉತ್ತಮವಾದಂತಹ ವೇದಿಕೆಗಳನ್ನು ಕಲ್ಪಿಸಿಕೊಡೋಣ ಎಂದರು.

ಸಹನಿರ್ದೇಶಕ ಅಮರ್ ಲೋಬೋ ಮಾತನಾಡಿನಾವು ಬೇರೆಯವರಿಂದ ಕೇವಲ ಸಹಕಾರವನ್ನು ಪಡೆದುಕೊಳ್ಳುವಂತವರಾಗದೆ ಸಹಕಾರದ ಅಗತ್ಯವಿರುವವರಿಗೆ ಸಹಾಯವನ್ನು ಮಾಡುವಂತವರಾಗಬೇಕು ಎಂದು ತಿಳಿಸಿದರು.
ಕಾರ್ಯಕರ್ತ ಪದ್ಮನಾಭ ಸ್ವಾಗತಿಸಿ, ಸುಮಂಗಲ ವಂದಿಸಿದರು, ಜಲಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News