×
Ad

ಸುಳ್ಯ: "ಕಾಡು ಮನುಷ್ಯ"ನ ಭೇಟಿ ಮಾಡಿದ ಜಿಲ್ಲಾಧಿಕಾರಿ

Update: 2016-01-22 17:24 IST

- ನೂಜಾಲ ಚಂದ್ರಶೇಖರರ ಪುನರ್‌ವಸತಿಗೆ ಕ್ರಮ - ಅನ್ಯಾಯವಾಗಿದ್ದರೆ ತನಿಖೆಯ ಭರವಸೆ

ಸುಳ್ಯ: ಏಲಂನಲ್ಲಿ ಮಾರಾಟವಾದ ಜಾಗ ಮರಳಿ ಪಡೆಯುವ ಕನಸಿನೊಂದಿಗೆ ಹಲವು ವರ್ಷಗಳೊಂದಿಗೆ ಕಾಡು ಬದಿಯಲ್ಲಿ ಕಾರಿನಲ್ಲೇ ವಾಸ ಮಾಡುತ್ತಿದ್ದ ನೂಜಾಲು ಚಂದ್ರಶೇಖರ ಅವರನ್ನು ಜಿಲ್ಲಾಧಿಕಾರಿಗಳು ಭೇಟಿ ಮಾಡಿ ಊರಿಗೆ ಮರಳುವಂತೆ ಸಲಹೆ ನೀಡಿದ್ದಾರೆ.


ಹಿನ್ನಲೆ:ನೆಲ್ಲೂರು ಕೆಮ್ರಾಜೆ ಗ್ರಾಮದ ನೂಜಾಲದವರಾದ ಚಂದ್ರಶೇಖರ್‌ರು ತಂದೆ, ತಾಯಿ, ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರೊಂದಿಗೆ ಜೀವನ ಸಾಗಿಸುತ್ತಿದ್ದು, ವಾಹನ ಚಾಲಕರಾಗಿ ದುಡಿಯುತ್ತಿದ್ದರು. ಸುಮಾರು ಹದಿನೈದು ವರ್ಷಗಳ ಹಿಂದೆ ಇವರು ನೆಲ್ಲೂರು ಕೆಮ್ರಾಜೆ-ಉಬರಡ್ಕ ಸಹಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿ ನಿಂದ ಸಾಲ ಪಡೆದಿದ್ದರು. ಬಳಿಕ ಇವರ ಜಾಗ  ಮನೆಯವರು ಹಾಗೂ ಕೆಲವು ಊರಿನ ಮುಖಂಡರ ಸಮ್ಮುಖದಲ್ಲಿ ಪಾಲಾಗಿತ್ತು. ಅದರಂತೆ ಎಲ್ಲರಿಗೂ ಸಾಲದ ಮೊತ್ತವೂ ಕೂಡಾ ಪಾಲಾಗಿ ಬ್ಯಾಂಕಿಗೆ ಪಾವತಿಸುವಂತೆ ಮಾತುಕತೆ ಕೂಡಾ ಆಗಿತ್ತು.

ಮನೆ ತೆರವು:ಇದೇ ಸಮಯದಲ್ಲಿ ನೆಲ್ಲೂರು ಕೆಮ್ರಾಜೆ ಸೊಸೈಟಿ ಉಬರಡ್ಕದಿಂದ ಪ್ರತ್ಯೇಕವಾಯಿತು. ಚಂದ್ರಶೇಖರ್ ಸರಿಯಾಗಿ ಸಾಲ ಮರುಪಾವತಿ ಮಾಡದೆ ಅವರಿಗೆ ಪಾಲಿನಲ್ಲಿ ದೊರೆತಿದ್ದ ಜಾಗದ ಮೇಲೆ ಬ್ಯಾಂಕಿನಿಂದ ನೋಟಿಸ್ ಕಳುಹಿಸತೊಡಗಿದರು. ಚಂದ್ರಶೇಖರ್‌ರಿಂದ ಸಮರ್ಪಕ ಉತ್ತರ ದೊರೆಯದೆ ಇದ್ದುದರಿಂದ ಎ.ಆರ್.ಕೋರ್ಟ್‌ನಲ್ಲಿ ಡಿಕ್ರಿಯಾಗಿ ಜಾಗ ಏಲಂಗೆ ಆದೇಶವಾಯಿತು. ಚಂದ್ರಶೇಖರರ ಜಾಗ ಏಲಂ ಕೂಡಾ ಆಯಿತು. ಜಾಗ ಏಲಂ ಆಗಿದ್ದರೂ ಚಂದ್ರ ಶೇಖರ್ ಸ್ಥಳದಿಂದ ಎದ್ದಿರಲಿಲ್ಲ. ಏಲಂ ಸರಿಯಲ್ಲವೆಂದು ಹೋರಾಟ ನಡೆಸಿದರು. ಆದರೆ ಸೊಸೈಟಿಯವರು ಅದನ್ನು ಒಪ್ಪದೆ 13 ವರ್ಷಗಳ ಹಿಂದೆ ಪೊಲೀಸ್ ರಕ್ಷಣೆಯಲ್ಲಿ ತೆರವು ಕಾರ್ಯ ಕೈಗೊಂಡರು. ತನ್ನ ಮನೆ ಹಾಗೂ ಜಾಗವನ್ನು ಕಳೆದುಕೊಂಡ ಚಂದ್ರಶೇಖರ್ ಅತಂತ್ರ ಸ್ಥಿತಿಯಲ್ಲಿದ್ದರು. ಅನಿವಾರ್ಯವಾಗಿ ಇತರೆಡೆಗೆ ಕೆಲಸಕ್ಕೆ ಹೋಗಬೇಕಾಯಿತು. ಅರಂತೋಡಿನ ಅಡ್ತಲೆಗೆ ಬಂದು ತೋಟ ನೋಡಿಕೊಳ್ಳುವ ಕೆಲಸಕ್ಕೆ ಸೇರಿದರು. ಅಲ್ಲಿಯೂ ಸರಿಬಾರದೆ ಅಲ್ಲೇ ಸಮೀಪವಿರುವ ಅಕ್ಕನ ಮನೆಯಲ್ಲಿ ಸ್ವಲ್ಪ ಸಮಯವಿದ್ದರು. ಬಳಿಕ ಅಲ್ಲೇ ಪಕ್ಕದ ಕಾಡಲ್ಲಿ ಗುಡಿಸಲು ನಿರ್ಮಿಸಿ ಬುಟ್ಟಿ ಹೆಣೆದು ಮಾರಾಟ ಮಾಡಿ ಜೀವನ ಸಾಗಿಸತೊಡಗಿದರು. ಬಳಿಕ ಸುಳ್ಯದ ವಕೀಲರೊಬ್ಬರ ಕಾರನ್ನು ಖರೀದಿಸಿ ಬಳಿಕ ಅದನ್ನು ಅರಂತೋಡು ಗ್ರಾಮದ ಬೆದ್ರುಪಣೆ ಎಂಬಲ್ಲಿ ಕಾಡಿನ ಬದಿ ರಸ್ತೆಯ ಪಕ್ಕ ನಿಲ್ಲಿಸಿ ಅದರಲ್ಲಿ ಜೀವನ ಸಾಗಿಸತೊಡಗಿದರು. ಕಾಡಿನಿಂದ ಬುಟ್ಟಿ ಹೆಣೆ ಯುವ ಪರಿಕರಗಳನ್ನು ತಂದು ಅದನ್ನು ಹೆಣೆದು ಸುಳ್ಯದ ಅಂಗಡಿಯೊಂದರಲ್ಲಿ ಮಾರಿ ಅದರ ಉಳಿತಾಯದ ಹಣವನ್ನು ಏಲಂನಲ್ಲಿ ಮಾರಲ್ಪಟ್ಟ ಜಾಗವನ್ನು ಮರಳಿ ಪಡೆಯಲು ಪಣತೊಟ್ಟರು. ಚಂದ್ರಶೇಖರರ ಈ ಜೀವನಶೈಲಿ ’ವಾರ್ತಾ ಭಾರತಿ’ ಸಹಿತ ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಎಸಿ ಮತ್ತಿತರ ಅಧಿಕಾರಿಗಳು ಪ್ರಾಥಮಿಕ ತನಿಖೆಗಾಗಿ ಚಂದ್ರಶೇಖರರನ್ನು ಭೇಟಿ ಮಾಡಿದ್ದರು. 

ಡಿಸಿ ಭೇಟಿ:ಗುರುವಾರ ಸುಳ್ಯಕ್ಕೆ ಜನತಾದರ್ಶನ ಕಾರ್ಯಕ್ರಮಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಚಂದ್ರಶೇಖರ್ ವಾಸಿಸುವ ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿದರು. ಚಂದ್ರಶೇಖರ್ ತನಗೆ ಅನ್ಯಾಯವಾಗಿದೆ ಎಂದು ಡಿಸಿಯವರಲ್ಲಿ ನಿವೇದಿಸಿಕೊಂಡರು. ಸಹಾಯಕ ಕಮೀಷನರ್ ಡಾ.ರಾಜೇಂದ್ರ, ತಹಶೀಲ್ದಾರ್ ಅನಂತಶಂಕರ, ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ, ಸಹಕಾರಿ ಇಲಾಖೆಯ ಎಆರ್ ಮತ್ತು ಡಿಆರ್, ನೆಲ್ಲೂರು ಕೆಮ್ರಾಜೆ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಜಮೀನು ಹರಾಜು ಪ್ರಕ್ರಿಯೆಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಚಂದ್ರಶೇಖರರು ನಿವೇದಿಸಿಕೊಂಡಿದ್ದಾರೆ. ಮತ್ತೊಂದೆಡೆ ನಾಗರಿಕ ಸಮಾಜದಲ್ಲಿ ಅವರು ಈ ರೀತಿ ಕಾಡಿನಲ್ಲಿ ಬದುಕುವುದು ಸರಿಯಲ್ಲ. ಹೀಗಾಗಿ ಇವೆರಡರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಮೇಲ್ನೋಟಕ್ಕೆ ಸೊಸೈಟಿಯವರು ಹರಾಜು ಪ್ರಕ್ರಿಯೆಯನ್ನು ಕ್ರಮಬದ್ಧವಾಗಿ ನಡೆಸಿರುವುದು ಕಂಡು ಬರುತ್ತದೆ. ಅಲ್ಲದೆ ಈ ಕುರಿತಂತೆ ಚಂದ್ರಶೇಖರರು ಯಾವುದೇ ದಾವೆಯನ್ನೂ ಹೂಡಿಲ್ಲ. ಹೆಚ್ಚುವರಿ ಇರುವ ಒಂದು ಎಕರೆ ಜಾಗ ಅಕ್ರಮ-ಸಕ್ರಮದ ಮೂಲಕ ನೀಡಬೇಕೆಂಬ ಬೇಡಿಕೆಯೂ ಇದೆ. ಇದನ್ನು ಪರಿಶೀಲಿಸಲಾಗುವುದು. ಚಂದ್ರಶೇಖರರ ಆರೋಗ್ಯ ತಪಾಸಣೆ ನಡೆಸಿ ಅವರನ್ನು ಊರಿಗೆ ಬಂದು ಜೀವನ ನಡೆಸುವಂತೆ ಸೂಚಿಸುತ್ತೇವೆ. ಪನರ್‌ವಸತಿ ಕಲ್ಪಿಸಲು ಪ್ರಯತ್ನಿಸುತ್ತೇವೆ. ಹೀಗಿದ್ದೂ ಅವರು ಸ್ಪಂದಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

                                       

                 



                                 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News