ಮೂಡುಬಿದಿರೆ; ಧನ್ವಂತರಿ ಆಯುರ್ ಜ್ಯೋತಿ ರಥ ಯಾತ್ರೆ ಮೂಡುಬಿದಿರೆಗೆ
ಮೂಡುಬಿದಿರೆ;ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಲಿರುವ ವಿಶ್ವ ಆಯುಷ್ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನಿಂದ ಹೊರಟ ಧನ್ವಂತರಿ ಆಯುರ್ ಜ್ಯೋತಿ ರಥ ಯಾತ್ರೆಯು ಶುಕ್ರವಾರ ಮೂಡುಬಿದಿರೆಗೆ ಆಗಮಿಸಿತು. ಉಡುಪಿಯಿಂದ ಆಗಮಿಸಿದ ಈ ರಥವನ್ನು ಅಲಂಗಾರು ಬಡಗು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಸ್ವಾಗತಿಸಿ ಪೂಜೆ ನೆರವೇರಿಸಲಾಯಿತು. ಅಲ್ಲಿಂದ ವಿದ್ಯಾಗಿರಿ ಆಳ್ವಾಸ್ ಕಾಲೇಜಿಗೆ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ದೇವದಾಸ್ ಪುತ್ರನ್ ಮಾತನಾಡಿ ಆಯುರ್ವೇದದಲ್ಲಿ ನಕಲಿ ವೈದ್ಯರು, ಪಾರಂಪರಿಕ ವೈದ್ಯರು ಮತ್ತು ಆಯುರ್ವೇದ ವೈದ್ಯ ಪದವಿಯನ್ನು ಪಡೆದವರ ಸಮಗ್ರ ಮಾಹಿತಿಯನ್ನು ಆಯುಷ್ ಮಂಡಳಿ ಗುರುತಿಸಿದ್ದು ಇದರಿಂದ ನಕಲಿ ವೈದ್ಯರನ್ನು ತಡೆಗಟ್ಟಲು ಸಹಾಯವಾಗಿದೆ, ಹಾಗೂ ಆಯುಷ್ ವೈದ್ಯರ ಗೌರವ ಹೆಚ್ಚಲಿದೆ ಯೋಗಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಲಭಿಸಿದ ಹಾಗೆ ಭವಿಷ್ಯದಲ್ಲಿ ಆಯುರ್ವೇದವೂ ವಿಶ್ವಮಾನ್ಯವಾಗಲಿದೆ. ಆಯುಷ್ ವೈದ್ಯ ಪದ್ದತಿಯ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಅಧ್ಯಯನ ಮಾಡಿ ಇದರ ಗೌರವವನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.
ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ಕಾರ್ಯದರ್ಶಿ ಡಾ. ಮದನ ನಾಡಿಗೇರ್ ಮಾತನಾಡಿ ಆಯುರ್ವೇದ ವೈದ್ಯರನ್ನು ಸಮಾಜವು ದ್ವಿತೀಯ ದರ್ಜೆಯ ವೈದ್ಯರನ್ನಾಗಿ ನೋಡುತ್ತಿದೆ. ವ್ಯಕ್ತಿಯ ರೋಗಕ್ಕಿಂತ ಹೊರತಾದ ಸಾಮಾಜಿಕ ಮತ್ತು ಧಾರ್ಮಿಕ ರೋಗವನ್ನು ವಿಶ್ವಸಂಸ್ಥೆಯು ಸೇರ್ಪಡೆಗೊಳಿಸಿದ್ದು ಇದನ್ನು ನಿವಾರಿಸಲು ಆಯುಷ್ ವೈದ್ಯ ಪದ್ಧತಿಯು ಸಹಾಕಾರಿಯಾಗಲಿದೆ ಎಂದರು. ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣರಾಜ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ಸದಸ್ಯ ಡಾ. ಖಾಲಿದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ವಿನಯಚಂದ್ರ ಶೆಟ್ಟಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿ ಕೇಂದ್ರ ಸರಕಾರವು ಆಯುರ್ವೇದದ ಕುರಿತು ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸಿದೆ ಇದರಿಂದ ಆಯುಷ್ ಅಧ್ಯಯನ ಮತ್ತು ಜನಪ್ರಿಯಗೊಳ್ಳಲು ಪೂರಕವಾಗಿದೆ. ಭವಿಷ್ಯದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಬೇಡಿಕೆ ಲಭಿಸಲಿದ್ದು, ಆಯುರ್ವೇದ ವೈದ್ಯ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಲು ಪ್ರಯತ್ನಿಸಬೇಕು ಎಂದರು ಡಾ. ಜೀತ ಕಾರ್ಯಕ್ರಮ ನಿರ್ವಹಿಸಿದರು.