ವೇಮುಲ ಆತ್ಮಹತ್ಯೆ:ಕೊನೆಗೂ ವೌನ ಮುರಿದ ಪ್ರಧಾನಿ ಮೋದಿ
ಮಗನನ್ನು ಕಳೆದುಕೊಂಡ ತಾಯಿಯ ನೋವು ನನಗೆ ಅರ್ಥವಾಗುತ್ತದೆ
ಹೊಸದಿಲ್ಲಿ/ಹೈದರಾಬಾದ್,ಜ.22: ಇಡೀ ದೇಶದ ಹೃದಯವನ್ನು ಕಲಕಿರುವ ಹೈದರಾಬಾದ್ ವಿವಿಯ ದಲಿತ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಆತ್ಮಹತ್ಯೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ಕೊನೆಗೂ ತನ್ನ ವೌನವನ್ನು ಮುರಿದಿದ್ದಾರೆ. ಶುಕ್ರವಾರ ರೋಹಿತ್ ಸಾವಿಗೆ ತೀವ್ರ ವ್ಯಥೆಯನ್ನು ವ್ಯಕ್ತಪಡಿಸಿದ ಮೋದಿ ಒಂದು ಹಂತದಲ್ಲಿ ಭಾವೋದ್ವೇಗಕ್ಕೂ ಒಳಗಾದರು.
ನನ್ನ ದೇಶದ ಯುವಪುತ್ರ ರೋಹಿತ್ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಅನಿವಾರ್ಯತೆಗೊಳಗಾದರು. ಅವರ ಕುಟುಂಬವು ಅನುಭವಿಸುತ್ತಿರುವ ನೋವು ನನಗೆ ಅರ್ಥವಾಗುತ್ತದೆ ಎಂದು ಲಕ್ನೋದಲ್ಲಿ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿವಿಯ ಘಟಿಕೋತ್ಸವದಲ್ಲಿ ಭಾಷಣ ಮಾಡುತ್ತಿದ್ದ ಮೋದಿ ಹೇಳಿದರು.
ಓರ್ವ ತಾಯಿ ತನ್ನ ಮಗನನ್ನು ಕಳೆದುಕೊಂಡಿದ್ದಾಳೆ,ಇದಕ್ಕಿಂತ ದೊಡ್ಡ ದುಃಖ ಇನ್ನೊಂದಿಲ್ಲ ಎಂದ ಅವರು, ಆತ್ಮಹತ್ಯೆಯ ಹಿಂದಿನ ಕಾರಣಗಳು ಮತ್ತು ಈ ವಿಷಯದಲ್ಲಿ ನಡೆಯುತ್ತಿರುವ ರಾಜಕಾರಣ ಏನೇ ಇರಲಿ...ಆದರೆ ಓರ್ವ ತಾಯಿ ತನ್ನ ಮಗನನ್ನು ಕಳೆದುಕೊಂಡಿದ್ದಾಳೆ ಎನ್ನುವುದು ಸತ್ಯ ಎಂದರು.
ತೀವ್ರಗೊಂಡ ಪ್ರತಿಭಟನೆ
ಅತ್ತ ಹೈದರಾಬಾದ್‌ನಲ್ಲಿ ಕೇಂದ್ರೀಯ ವಿವಿ ಕುಲಪತಿ ಅಪ್ಪಾಗೌಡರ ರಾಜೀನಾಮೆಗೆ ಆಗ್ರಹ ಶುಕ್ರವಾರ ಇನ್ನಷ್ಟು ಹುರಿಗೊಂಡಿದೆ. ಅವರನ್ನು ಹುದ್ದೆಯಿಂದ ವಜಾಗೊಳಿಸಲು ಕೇಂದ್ರವು ಒಪ್ಪುವವರೆಗೆ ತಮ್ಮ ಪ್ರತಿಭಟನೆಯನ್ನು ನಿಲ್ಲಿಸಲು ವಿವಿ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ. ಈ ವಿದ್ಯಾರ್ಥಿಗಳ ‘ನ್ಯಾಯಕ್ಕಾಗಿ ಹೋರಾಟ’ಕ್ಕೆ ತಮಿಳುನಾಡು ಮತ್ತು ದಿಲ್ಲಿಯಂತಹ ಇತರ ರಾಜ್ಯಗಳ ಹಲವಾರು ವಿದ್ಯಾರ್ಥಿ ಒಕ್ಕೂಟಗಳು ಬೆಂಬಲವಾಗಿ ನಿಂತಿವೆ. ಈ ಒಕ್ಕೂಟಗಳ ಸದಸ್ಯರು ಹಲವಾರು ‘ಹೊರಸ್ಥಳಗಳ’ರಾಜಕೀಯ ನಾಯಕರೊಂದಿಗೆ ವಿವಿ ಕ್ಯಾಂಪಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.