ಮ್ಯಾನ್ಮಾರ್: ರಾಜಕೀಯ ಕೈದಿಗಳ ಬಿಡುಗಡೆ
ಯಾಂಗನ್, ಜ. 22: ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯ ಪಕ್ಷ ಬಹುಮತವನ್ನು ಹೊಂದಿರುವ ಸಂಸತ್ತಿನ ಚೊಚ್ಚಲ ಅಧಿವೇಶನ ಆರಂಭಗೊಳ್ಳುವ ದಿನಗಳ ಮೊದಲು, ಮ್ಯಾನ್ಮಾರ್ ಶುಕ್ರವಾರ ಹಲವಾರು ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೂ ಕಿಯ ಪಕ್ಷ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬಂದಿರುವುದನ್ನು ಸ್ಮರಿಸಬಹುದು.
ಮ್ಯಾನ್ಮಾರ್‌ಗೆ ಸೋಮವಾರ ಭೇಟಿ ನೀಡಿದ್ದ ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್, ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ನಿರ್ಗಮನ ಅಧ್ಯಕ್ಷ ತೀನ್ ಸಿಯನ್‌ರನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಕಂತಿನ ಕೈದಿಗಳ ಬಿಡುಗಡೆಯಾಗಿದೆ.
ಕೈದಿಗಳಿಗೆ ನೀಡಿರುವ ಕ್ಷಮಾದಾನವು ತೀನ್ ಸಿಯನ್ ಸರಕಾರದ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಮ್ಯಾನ್ಮಾರ್‌ನಲ್ಲಿ 49 ವರ್ಷಗಳ ಸೇನಾ ಆಡಳಿತದ ಬಳಿಕ 2011ರಲ್ಲಿ ತೀನ್ ಸಿಯನ್‌ರ ಅರೆ ನಾಗರಿಕ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಅವರ ಅವಧಿಯಲ್ಲಿ ಹಲವು ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.
‘‘ಈ ವರೆಗೆ, ಇನ್‌ಸೀನ್ ಜೈಲಿನಿಂದ 18 ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಇಂದು 21 ಮಂದಿಯನ್ನು ಬಿಡುಗಡೆ ಮಾಡಲಾಗುವುದು’’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.